ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ಶಾಸಕ ಪ್ರಸಾದ ಅಬ್ಬಯ್ಯ ಅವರ ಸಾರ್ವಜನಿಕ ಸಂಪರ್ಕ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ಸೋಮವಾರ ನೆರವೇರಿತು.
ಮೊದಲು ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ, ಹೋಮ ಹವನಗಳು ನಡೆದವು.
ಉದ್ಘಾಟನೆ ನೆರವೇರಿಸಿದ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಕಳೆದ 11ವರ್ಷಗಳಿಂದ ಹು-ಧಾ ಪೂರ್ವ ಕ್ಷೇತ್ರದ ಜನರ ಸಮಸ್ಯೆಯನ್ನು ತಮ್ಮದೇ ಸಮಸ್ಯೆ ಎಂಬಂತೆ ಬಗೆಹರಿಸುತ್ತಿರುವ, ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸುತ್ತಿರುವ ಶಾಸಕ ಪ್ರಸಾದ ಅಬ್ಬಯ್ಯ ನಿಜವಾದ ಜನನಾಯಕರು. ಸುಂದರ ಮತ್ತು ಸುಸಜ್ಜಿತ ಕಚೇರಿಯು ಇಂದು ಲೋಕಾರ್ಪಣೆಗೊಂಡಿದ್ದು, ಇನ್ನು ಹೆಚ್ಚಿನ ಸೇವೆಯನ್ನು ಸಾರ್ವಜನಿಕರಿಗೆ ನೀಡುತ್ತಾರೆ ಎಂಬ ಭರವಸೆ ನನಗಿದೆ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಜನರು ನನ್ನನ್ನು ಮೂರು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ಸೇವೆ ಮಾಡುವುದು ನನ್ನ ಕರ್ತವ್ಯವೂ ಹೌದು. ಪ್ರತಿದಿನ ಕಚೇರಿಗೆ ನೂರಾರು ಜನರು ಭೇಟಿ ನೀಡುತ್ತಾರೆ. ಅವರ, ಪ್ರತಿಯೊಂದು ಅಹವಾಲುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆಗಳಿಗೆ ಪರಿಹಾರ ನೀಡಲು ಇಂದು ಸುಸಜ್ಜಿತ ಕಚೇರಿಯನ್ನು ಲೋಕಾರ್ಪಣೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ಹೇಳಿದರು.
ಮೇಯರ್ ರಾಮಪ್ಪ ಬಡಿಗೇರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಅಲ್ತಾಫ್ ಹಳ್ಳೂರ, ಅನಿಲಕುಮಾರ್ ಪಾಟೀಲ, ಇತರರು ಇದ್ದರು.