ಮುದ್ದೇಬಿಹಾಳ (ವಿಜಯಪುರ) : ಪತ್ರಕರ್ತನ ಅಭಿಪ್ರಾಯಗಳು ಪತ್ರಿಕೆಯಲ್ಲಿ ಕಾಣದೆ ಸಮಾಜದ ಮನಸ್ಥಿತಿಯ ಮಾತುಗಳು ಪತ್ರಿಕೆಗಳಲ್ಲಿ ಬಂದಾಗ ಅದಕ್ಕೆ ಬೆಲೆ ದೊರೆಯುತ್ತದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಸಭಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಹಾಗೂ ವಿತರಕರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಸೌಲಭ್ಯಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಲವರು ಬರೆಯುತ್ತಿರುವುದನ್ನು ಓದಲೂ ಆಗುವುದಿಲ್ಲ. ವಿಕೃತ ಬರಹಗಳನ್ನು ಓದುವವರು ವಿಕೃತ ಮನಸ್ಸಿನವರೂ ಇರುತ್ತಾರೆ. ಉತ್ತಮವಾಗಿ ಬರೆಯುವವವರಿಗೆ ಇಂದಿಗೂ ಸಮಾಜದಲ್ಲಿ ಬೆಲೆ ಇದೆ ಎಂದರು.
ಟಿಆರ್‌ಪಿ ಧಾವಂತದಲ್ಲಿ ಟಿವಿ ಮಾಧ್ಯಮಗಳು ಜನರಲ್ಲಿ ಭಯ ಬಿತ್ತುವ ಕೆಲಸ ಮಾಡುತ್ತಿವೆ ಎಂಬ ಭಾವನೆ ಜನರಲ್ಲಿ ಮನೆ ಮಾಡಿದೆ. ದಾಖಲೆಗಳ ಸಮೇತ ಸತ್ಯವಾದದ್ದನ್ನೇ ಬರೆಯಬೇಕು ಎಂದರು.
ಕುಂಟೋಜಿ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ದೇವರು ಮಾತನಾಡಿ, ಮಾಧ್ಯಮಗಳು ಕತ್ತಲನ್ನು ಚೆಲ್ಲುತ್ತಿವೆ. ಜನರೇ ಜಾಗೃತರಾಗಿ ಬೆಳಕನ್ನು ಸೂಸುತ್ತಿದ್ದಾರೆ. ಸಮಾಜಮುಖಿ ಚಿಂತನೆಯಲ್ಲಿ ಪತ್ರಕರ್ತರ ಅಕ್ಷರಗಳು ಅರಳಬೇಕು ಎಂದರು.
ಸಂಘದ ಸದಸ್ಯರಿಗೆ 2022-23ನೇ ಸಾಲಿನ ಐಡಿ ಕಾರ್ಡ್, ತಾಲೂಕಿನ ಪತ್ರಿಕಾ ವಿತರಕರಿಗೆ ಸೌಲಭ್ಯ ವಿತರಣೆ, ಜಿಲ್ಲಾ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ, ಪತ್ರಕರ್ತರ ಮಕ್ಕಳಾದ ಅಮಾನುಲ್ಲಾ ಹಳ್ಳೂರ, ರುಕ್ಸಾನಾ ಮುಲ್ಲಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ. ವಡವಡಗಿ ಉಪನ್ಯಾಸ ನೀಡಿದರು. ಸಂಘದ ತಾಲೂಕು ಅಧ್ಯಕ್ಷ ಮುತ್ತು ವಡವಡಗಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಮಾಜಿ ಅಧ್ಯಕ್ಷ ರಾಜು ಕೊಂಡಗೂಳಿ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಜೆಡಿಎಸ್ ನಾಯಕಿ ಮಂಗಳಾದೇವಿ ಬಿರಾದಾರ, ತಹಸೀಲ್ದಾರ್ ಕಡಕಭಾವಿ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಸಮಾಜ ಸೇವಕ ಸಿದ್ದನಗೌಡ ಬಿರಾದಾರ, ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ. ಅಸ್ಕಿ, ಕುರುಬರ ಸಂಘದ ತಾಲೂಕಾಧ್ಯಕ್ಷ ಎಂ.ಎನ್. ಮದರಿ, ಬಿಇಒ ಎಸ್.ಜೆ. ನಾಯಕ, ಬಿಜೆಪಿ ಅಧ್ಯಕ್ಷ ಪರಶುರಾಮ ಪವಾರ, ಜೆಡಿಎಸ್ ಅಧ್ಯಕ್ಷ ಪ್ರಭುಗೌಡ ಪಾಟೀಲ, ಮೌಲಾನಾ ಕಾರಿ, ಹಿರಿಯ ಪತ್ರಿಕಾ ವಿತರಕ ಎಸ್.ಬಿ.ಕತ್ತಿ ಇತರರಿದ್ದರು.
ಇಂದುಶೇಖರ ಮಣೂರ ಪ್ರತಿಜ್ಞಾವಿಧಿ ಬೋಧಿಸಿದರು. ಸಂಗಮೇಶ ಶಿವಣಗಿ, ಸಂಗಡಿಗರು ಪ್ರಾರ್ಥಿಸಿದರು. ಗೋಪಾಲ ಹೂಗಾರ, ಶ್ರೀಶೈಲ ಹೂಗಾರ ನಿರೂಪಿಸಿದರು. ಪರಶುರಾಮ ಕೊಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ನಂದೆಪ್ಪನವರ ವಂದಿಸಿದರು.
ಪ್ರಶಸ್ತಿ ಪ್ರದಾನ : ಶ್ರೀ ಕುಮಾರೇಶ್ವರ ಜೀವನ ವಿಕಾಸ ೌಂಡೇಷನ್ ಮತ್ತು ಕುಂಟೋಜಿ ಸಂಸ್ಥಾನ ಹಿರೇಮಠದಿಂದ ಸಾಧಕರಿಗೆ ಕೊಡಮಾಡಲ್ಪಡುವ ನಯನ ಭಾರ್ಗವ ಪ್ರಶಸ್ತಿಯನ್ನು ವಿಜಯಪುರದ ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಬಿ.ಎಲ್., ಕಾನಿಪ ಸಂಘದಿಂದ ಕೊಡಮಾಡುವ ಆದರ್ಶ ಪತ್ರಕರ್ತ ಪ್ರಶಸ್ತಿಗೆ ಸಿಂದಗಿಯ ಪತ್ರಕರ್ತ ರವಿಚಂದ್ರ ಮಲ್ಲೇದ ಅವರಿಗೆ ಪ್ರದಾನ ಮಾಡಲಾಯಿತು.
ಮುದ್ದೇಬಿಹಾಳದಲ್ಲಿ ಪತ್ರಿಕಾ ಭವನ ನಿರ್ಮಿಸಲು 25 ಲಕ್ಷ ರೂ. ಅನುದಾನ ನೀಡುತ್ತೇನೆ. ಅದನ್ನು ಈ ವರ್ಷದಲ್ಲೇ ಬಿಡುಗಡೆ ಮಾಡಿಸುತ್ತೇನೆ. ಪುರಸಭೆಯಿಂದ ಖಾಲಿ ನಿವೇಶನವನ್ನು ಪಡೆದು ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡುತ್ತೇನೆ.ಎ.ಎಸ್. ಪಾಟೀಲ ನಡಹಳ್ಳಿ, ಶಾಸಕರು