ಜಿಲ್ಲೆ

ಗೋಶಾಲೆ ತೆರೆಯಲು ಶೀಘ್ರ ಕ್ರಮ

ಎ. ಆರ್. ರಘುರಾಮ


ಹನೂರು : ಕಾಡಂಚಿನ ಗ್ರಾಮಗಳಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇದೆ. ಆದ್ದರಿಂದ ಗೋಶಾಲೆ ತೆರೆಯುವ ಸಂಬಂಧ ಅಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮವಹಿಸಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಪಟ್ಟಣದ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಾನುವಾರು ಸಾಕಣೆದಾರರಿಗೆ ಮೇವು ಕತ್ತರಿಸುವ ಯಂತ್ರವನ್ನು ವಿತರಿಸಿ ಮಾತನಾಡಿದರು. ಹನೂರು ಭಾಗದಲ್ಲಿ ಕೃಷಿಯ ಜತೆಗೆ ಬಹುಪಾಲು ರೈತರು ಕುಟುಂಬದ ನಿರ್ವಹಣೆಗಾಗಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ತಾಲೂಕಿನಲ್ಲಿ 65 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆದರೆ ಈ ವರ್ಷ ಮಳೆಯಿಲ್ಲದ ಪರಿಣಾಮ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಹಾಗಾಗಿ ಈ ಸಂಬಂಧ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಶೀಘ್ರವೇ ಗೋಶಾಲೆ ತೆರೆಯಲು ಸೂಚಿಸಲಾಗುವುದು ಎಂದರು. ತಾಲೂಕಿನಲ್ಲಿ ನೀರಾವರಿ ಪ್ರದೇಶವನ್ನು ಹೊರತು ಪಡಿಸಿ ಬೇರೆಡೆ ಹೈನುಗಾರಿಕೆಗೆ ಹೆಚ್ಚಿನ ಒತ್ತನ್ನು ನೀಡುತ್ತಿಲ್ಲ. ಈ ಸಂಬಂಧ ಸಮೀಕ್ಷೆ ನಡೆಸಿ ಗ್ರಾಮ ಪಂಚಾಯಿತಿವಾರು ಪಟ್ಟಿ ನೀಡುವಂತೆ ಪಶು ವೈದ್ಯಾಧಿಕಾರಿ ಡಾ. ಸಿದ್ದರಾಜು ಅವರಿಗೆ ಸೂಚಿಸಿದರು.