ಹನೂರು: ರಾಮಾಣ ಮಹಾ ಕಾವ್ಯದಲ್ಲಿನ ಆದರ್ಶಗಳನ್ನು ಅಳವಡಿಸಿಕೊಳ್ಳುವುದರಿಂದ ಬದುಕಿನಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಶಾಸಕ ಎಂ.ಆರ್ ಮಂಜುನಾಥ್ ಸಲಹೆ ನೀಡಿದರು.
ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಆವರಣದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಪ್ರಪಂಚದ ಅತ್ಯುನ್ನತ ಮಹಾಕಾವ್ಯಗಳಲ್ಲಿ ಒಂದು. ಇದರಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ವಿಫುಲವಾದ ಅಂಶಗಳು ಅಡಗಿವೆ. ಮಹರ್ಷಿ ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತವಲ್ಲ. ಹಾಗಾಗಿ ಪ್ರತಿಯೊಬ್ಬರೂ ರಾಮಾಯಣದ ನೀತಿಯನ್ನು ಅನುಸರಿಸಬೇಕು ಎಂದರು.
ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ತಾಪಂ ಇಒ ಉಮೇಶ್, ಬಿಇಒ ಶಿವರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ಶಿಕ್ಷಣ ಸಂಯೋಜಕ ಕಿರಣ್‌ಕುಮಾರ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್ ಮಠದ, ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು, ಸೆಸ್ಕ್ ಎಇಇ ಶಂಕರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದರಮ್ಮ ಇನ್ನಿತರರು ಇದ್ದರು.