ಚನ್ನರಾಯಪಟ್ಟಣ: ಸ್ವಚ್ಛತೆ ಕಾಪಾಡಲು ಜೀವವನ್ನು ಲೆಕ್ಕಿಸದೇ ದುಡಿಯುವ ಪೌರಕಾರ್ಮಿಕರು ನಿಜವಾದ ಶ್ರಮಜೀವಿಗಳು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಜಯದಶಮಿ ಪ್ರಯುಕ್ತ ಭಾನುವಾರ ‘ಶಾಸಕರ ನಾಲ್ಕು ತಿಂಗಳ ವೇತನ’ವನ್ನು 152 ಪೌರಕಾರ್ಮಿಕರಿಗೆ (ತಲಾ ಒಂದು ಸಾವಿರದಂತೆ) ಪ್ರೋತ್ಸಾಹ ಧನವನ್ನಾಗಿ ವಿತರಿಸಿ ಮಾತನಾಡಿದರು.
ಪಟ್ಟಣದ ಸ್ವಚ್ಛತೆ ಪಾಲನೆಯಲ್ಲಿ ಪೌರಕಾರ್ಮಿಕರ ಸೇವೆ ಮೌಲ್ಯಯುತವಾದದ್ದು. ಅವರಿಗೆ ಸೂಕ್ತ ನೆಲೆ, ಭದ್ರತೆ ಒದಗಿಸುವ ನಿಟ್ಟಿನಲ್ಲಿ ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಿಸಲು ಸೂಕ್ತ ಜಾಗ ಗುರುತಿಸುವಂತೆ ತಹಸೀಲ್ದಾರ್‌ಗೆ ಸೂಚಿಸಲಾಗಿದೆ ಎಂದರು.
ಸ್ವಚ್ಛತೆಗೆ ನಿತ್ಯ ಶ್ರಮಿಸುತ್ತಿರುವ 73 ಪೌರಕಾರ್ಮಿಕರು, 40 ಜನ ನೀರು ಸರಬರಾಜು ಸಿಬ್ಬಂದಿ, ಕಸದ ಗಾಡಿ ಚಾಲಕರು ಸೇರಿದಂತೆ 152 ಸಿಬ್ಬಂದಿಗೆ ತಲಾ ಒಂದು ಸಾವಿರ ರೂ.ದಂತೆ ನೀಡುತ್ತಿರುವುದು ಖುಷಿ ತಂದಿದೆ ಎಂದರು.
ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರಿಗೂ ಮನವಿ ಮಾಡಲಾಗಿದೆ ಎಂದರು. ತಹಸೀಲ್ದಾರ್ ಬಿ.ಎಂ. ಗೋವಿಂದರಾಜು, ಆರೋಗ್ಯ ನಿರೀಕ್ಷಕ ರಾಜು, ಪುರಸಭಾ ಸದಸ್ಯರಾದ ನವೀನ್, ಗಣೇಶ್, ಸುರೇಶ, ಧರಣೇಶ, ಟಿಎಪಿಸಿಎಂಎಸ್ ಅಧ್ಯಕ್ಷ ಕುಂಬಾರಹಳ್ಳಿ ರಮೇಶ, ಮುಖಂಡರಾ ಕೃಷ್ಣ, ರಾಜು, ಅನು ಇತರರು ಇದ್ದರು.