ಗುಬ್ಬಿ : ತುಮಕೂರು ಸೇರಿ ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಗೆ ಹೇಮೆ ನೀರು ಹಂಚಿಕೆ ನಿಯಮಾನುಸಾರ ಮಾಡಲಾಗಿದೆ. ಅಡಳಿತ ವ್ಯವಸ್ಥೆ ಸರಿಪಡಿಸಿದ್ದ ಕಾರಣ ಎಲ್ಲಿಯೂ ಗೊಂದಲ ಕಾಣಿಸಲಿಲ್ಲ. ಈ ಮೊದಲು ವ್ಯವಸ್ಥೆ ಮಾಡಬಹುದಿತ್ತು. ಆದರೆ ಹಾಸನ ಮುಖಂಡರಿಗೆ ಮನಸ್ಸಿರಿಲಿಲ್ಲವಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕುಟುಕಿದರು.
ಕಡಬ ಹೋಬಳಿ ಯಲಚೀಹಳ್ಳಿ ಕೆರೆ ಹೇಮಾವತಿ ನೀರಿನಿಂದ ತುಂಬಿ ಹರಿದ ಕಾರಣ ಗುರುವಾರ ಗಂಗಾಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯದಲ್ಲಿ 71 ತಾಲೂಕು ಮರಳುಗಾಡು ಪ್ರದೇಶವಾಗಲಿದೆ ಎಂಬ ವರದಿ ಇದೆ. 1200 ಅಡಿಗಳಿಗಿಂತ ಆಳದಲ್ಲಿ ಅಂತರ್ಜಲ ಹುಡುಕುವಂತಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿ ಅರಿತು ನದಿ ನೀರು ಪೋಲಾಗದಂತೆ ರೈತರು ಬಳಸಿಕೊಳ್ಳಬೇಕು ಎಂದರು.
ಶಾಸಕರಾದಿಯಾಗಿ ಹಲವು ಮುಖಂಡರು ಪಕ್ಷ ಬಿಡುವ ಬಗ್ಗೆ ಜನರಿಂದಲೇ ತಿಳಿಯುತ್ತಿದೆ. ಯಾರು ಯಾವ ಪಕ್ಷ ಬಿಡುವರು ಹಾಗೂ ಸೇರುವರು ಎಂಬ ಸ್ಪಷ್ಟ ಚಿತ್ರಣ ಗೊತ್ತಿಲ್ಲ. ಈ ಮಧ್ಯೆ ಗಟ್ಟಿ ನೆಲೆಯುಳ್ಳ ಬಿಜೆಪಿಯಿಂದ ದೂರ ಹೋಗುವವರ ಬಗ್ಗೆ ಹೆಚ್ಚು ತಲೆ ಕೆಡೆಸಿಕೊಳ್ಳುವುದಿಲ್ಲ. ಹೊಸಬರನ್ನು ತಂದು ಗೆಲ್ಲಿಸುವ ಶಕ್ತಿ ಪಕ್ಷಕ್ಕಿದೆ ಎಂದು ಬಿಜೆಪಿ ತೊರೆಯುವವರಿಗೆ ಪರೋಕ್ಷ ಟಾಂಗ್ ನೀಡಿದ ಸಚಿವರು, ಕಡಬ ಮತ್ತು ಸಿ.ಎಸ್.ಪುರ ಕೆರೆಗೆ ನೇರ ನೀರು ಹರಿಸುವ ಯೋಜನೆ ರೂಪಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಪ್ರಮುಖ ಕೆರೆಗಳು ಬಹು ನಿರೀಕ್ಷೆಯಲ್ಲಿದೆ. ಜತೆಗೆ ತಾಲೂಕಿನ ಬಿಕ್ಕೇಗುಡ್ಡ ಮತ್ತು ಹಾಗಲವಾಡಿ ಕೆರೆಗೆ ಹೇಮೆ ಹರಿಸುವ ಯೋಜನೆಯಲ್ಲಿ ಕಂಡ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗಿದೆ ಎಂದರು.
ಬಿಜೆಪಿ ಮುಖಂಡರಾದ ಎಸ್.ಡಿ.ದಿಲೀಪ್‌ಕುಮಾರ್, ಪಾರ್ಥಸಾರಥಿ, ಸಾಗರನಹಳ್ಳಿ ನಂಜೇಗೌಡ, ಶಿರಾ ಡಿವೈಎಸ್ಪಿ ಕುಮಾರಪ್ಪ, ರೈತಸಂಘದ ಗುರುಚನ್ನಬಸಪ್ಪ, ಗ್ರಾಪಂ ಸದಸ್ಯ ನಂದೀಶ್, ಸದಾಶಿವಯ್ಯ ಇತರರು ಇದ್ದರು.
ಬಿಕ್ಕೇಗುಡ್ಡ ಯೋಜನೆ ಸಿಕ್ಕಿದೆ ಚಾಲನೆ ; ಭೂಮಿ ಬಿಟ್ಟುಕೊಡಲು ರೈತರ ಮನವೊಲಿಸಲಾಗಿ ಬಿಕ್ಕೇಗುಡ್ಡ ಯೋಜನೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಹಾಗಲವಾಡಿ ಕೆರೆಗೆ ನೀರು ಹರಿಸಲು ವಿಶೇಷ ಮೇಲ್ಗಾಲುವೆ ನಿರ್ಮಾಣಕ್ಕೂ ಸಮ್ಮತಿ ದೊರೆಕಲಿದೆ. ಬೆಳೆ ಪರಿಹಾರ ಸೇರಿ ಇನ್ನಿತರ ವಿಷಯದೊಂದಿಗೆ ಸರ್ಕಾರದ ಮುಂದಿಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಮಂಚಲದೊರೆ ಭಾಗದ ಕೆರೆಗೆ ನೀರು ಹರಿಸುವ ಯೋಜನೆ ಕಷ್ಟವಾಗುತ್ತಿದೆ. ಎರಡು ಬಾರಿ ವಾಪಸ್ ಆಗಿರುವ ಈ ಯೋಜನೆಗೂ ಸೂಕ್ತ ಪರಿಹಾರ ಕಂಡು ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು.