ಚನ್ನಪಟ್ಟಣ : ಇ-ಖಾತೆ ವಿತರಣೆ ಜತೆಗೆ ಗ್ರಾಮಗಳ ಸಮಸ್ಯೆ ಅರಿತು ಪರಿಹರಿಸಲೆಂದು ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು.
ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇ- ಖಾತಾ ಆಂದೋಲನ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸಭೆಗೆ ಚಾಲನೆ ನೀಡಿ ಮಾತನಾಡಿದರು.
ನಗರ ಸೇರಿ ಗ್ರಾಮೀಣ ಭಾಗದಲ್ಲಿ ಇ -ಖಾತಾ ಸಮಸ್ಯೆ ವ್ಯಾಪಕವಾಗಿದೆ. ಜನರು ಮನೆ ಅಥವಾ ನಿವೇಶನಗಳನ್ನು ಖಾತೆ ಮಾಡಿಸಿಕೊಳ್ಳಲು ಹರಸಾಹಸಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಹೋಗಲಾಡಿಸುವ ಸಲುವಾಗಿ ಈ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಇದರೊಂದಿಗೆ ಗ್ರಾಮಗಳ ಸಮಸ್ಯೆ ಅರಿಯಲು ವೇದಿಕೆ ಕಲ್ಪಿಸಲಾಗಿದೆ. ಯಾವುದೇ ಸಮಸ್ಯೆಯಿದ್ದರೂ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಜನಪ್ರತಿನಿಧಿಯಾದವರು ಜನಸಾಮಾನ್ಯರ ಕಷ್ಟ-ಸುಖ ಎರಡನ್ನೂ ಕೇಳಬೇಕು. ಅಂತೆಯೇ, ನಿಮ್ಮ ಸಮಸ್ಯೆ ಆಲಿಸಲು ಅಧಿಕಾರಿಗಳೊಂದಿಗೆ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ಎಲ್ಲವನ್ನು ಒಂದೇ ದಿನದಲ್ಲಿ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಆದ್ಯತೆ ಮೇರೆಗೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ದೂರುಗಳ ಸುರಿಮಳೆ!
ತಾಲೂಕಿನ ಮಳೂರು, ಮತ್ತೀಕೆರೆ, ಮುದಗೆರೆ ಹಾಗೂ ಚಕ್ಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಶಾಸಕರು ಸಭೆ ನಡೆಸಿದರು. ದೊಡ್ಡಮಳೂರು ಸಭೆಯಲ್ಲಿ ನಾಡ ಕಚೇರಿ ಸ್ಥಳಾಂತರ, ಸರ್ಕಾರಿ ಶಾಲೆ ಸ್ಥಳಾಂತರ, ವಸತಿ, ರಸ್ತೆ, ಕುಡಿಯುವ ನೀರು, ರಸ್ತೆ ಬದಿ ತ್ಯಾಜ್ಯ ಎಸೆಯುವುದು, ದೇವಸ್ಥಾನಗಳಿಗೆ ಮೂಲ ಸೌಕರ್ಯ, ಸಮುದಾಯ ಭವನ ಸೇರಿ ಸಾಕಷ್ಟು ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತರಲಾಯಿತು. ಗ್ರಾಮದ ಅಪ್ರಮೇಯಸ್ವಾಮಿ ದೇವಾಲಯ ಶಾಲೆ ಮತ್ತು ಶಾಲೆಯ ಪಕ್ಕದಲ್ಲೇ ಶೌಚಗೃಹ ನಿರ್ಮಿಸಿದ್ದು, ಇದರಿಂದ ಮಕ್ಕಳಿಗೆ ಹಾಗೂ ಪ್ರವಾಸಿಗರಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ. ಬಹುತೇಕ ಸಭೆಗಳಲ್ಲಿ ಪಂಚಾಯಿತಿಗಳಲ್ಲಿ ಜನ ಸಾಮಾನ್ಯರ ಕೆಲಸ ಸಕಾಲದಲ್ಲಿ ಆಗದಿರುವ ಬಗ್ಗೆ ಹಾಗೂ ಜಲಜೀವನ್ ಕಾಮಗಾರಿಯ ಲೋಪಗಳ ಬಗ್ಗೆ ದೂರಿದರು.
ತ್ಯಾಜ್ಯ ವಿಲೇವಾರಿಗೆ ಕ್ರಮವಾಗಲಿ
ಮಳೂರು ಗ್ರಾಪಂ ತ್ಯಾಜ್ಯ ವಿಲೇವಾರಿ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆಯುರ್ವೇದ ವೈದ್ಯೆಯೊಬ್ಬರು ಶಾಸಕರ ಗಮನಸೆಳೆದರು. ಇದರಿಂದ ಅಧಿಕಾರಿಗಳ ವಿರುದ್ಧ ಗರಂ ಆದ ಸಿಪಿವೈ, ಈ ಸಮಸ್ಯೆ ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿದೆ. ಇನ್ನೂ ಇದನ್ನು ಬಗೆಹರಿಸುತ್ತಿಲ್ಲ ಎಂದರೆ ಹೇಗೆ? ತಾಪಂ ಇಒ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಈ ಸಮಸ್ಯೆ ನಿವಾರಿಸಬೇಕು ಎಂದು ತಾಕೀತು ಮಾಡಿದರು.
ತಾಪಂ ಇಒ ಸಂದೀಪ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್ ಸೇರಿ ಎಲ್ಲ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಅಧಿಕಾರಿ ವಿರುದ್ಧ ಗರಂ! : ತಾಲೂಕಿನ ಮತ್ತೀಕೆರೆಯಲ್ಲಿನ ಸಭೆಯಲ್ಲಿ ಜಿಪಂ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಮದುಸೂಧನ್ ವಿರುದ್ಧ ಶಾಸಕರು ಗರಂ ಆದರು. ಜಲಜೀವನ್ ಯೋಜನೆಯ ಬಗ್ಗೆ ಸಾಕಷ್ಟು ಆರೋಪಗಳಿವೆ. ಯಾವ ಗ್ರಾಮದಲ್ಲೂ ಈ ಯೋಜನೆ ಉತ್ತಮವಾಗಿಲ್ಲ. ಏಕೆ ನಮ್ಮ ಜನಕ್ಕೆ ಅನ್ಯಾಯ ಮಾಡುತ್ತಿದ್ದೀಯಾ? ಎಂದು ಗದರಿದರು. ಇದೇ ವೇಳೆ ಕುಡಿಯುವ ನೀರು ಪೂರೈಕೆ, ತ್ಯಾಜ್ಯ ವಿಲೇವಾರಿ ಗ್ರಾಪಂಗಳ ಜವಾಬ್ದಾರಿ. ಇದನ್ನೂ ಮಾಡುವುದಿಲ್ಲ ಎಂದರೆ ಹೇಗೆ ಎಂದು ಗ್ರಾಪಂ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಗ್ರಾಪಂನಲ್ಲಾಗಲಿ ಅಥವಾ ಯಾವುದೇ ಇಲಾಖೆಯಲ್ಲಾಗಲಿ ಯಾವುದೇ ಕೆಲಸಕ್ಕೂ ಅಧಿಕಾರಿಗಳಿಗೆ ನಯಾಪೈಸೆ ಲಂಚ ಕೊಡಬೇಡಿ ಎಂದು ಶಾಸಕರು ತಿಳಿಸಿದರು.