ಮಂಗಳೂರು : ನಗರದ ಪದುವಾ ಜಂಕ್ಷನ್ ಬಳಿ ನೆಟ್ಟು ಸಂರಕ್ಷಿಸಲಾಗುತ್ತಿದ್ದ ಮಿಯಾವಾಕಿ ಅರಣ್ಯವನ್ನು ಕಡಿಯದಂತೆ ಹೈಕೋರ್ಟ್ ಆದೇಶಿಸಿದೆ.
ಮಂಗಳೂರಿನ ವನ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಸಿಂಜಿನ್ ಇಂಟರ್ ನ್ಯಾಶನಲ್ ಮತ್ತು ಬಯೋಕಾನ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನೆಟ್ಟು ಸಂರಕ್ಷಿಸಲಾಗುತ್ತಿದ್ದ 1000ಕ್ಕೂ ಅಧಿಕ ಗಿಡ ಮರಗಳಿಂದ ಕೂಡಿದ್ದ ಮಿಯಾವಾಕಿ ಅರಣ್ಯವನ್ನು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವನ ಚಾರಿಟೇಬಲ್ ಟ್ರಸ್ಟ್ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ವಾದಿಗಳ ಪರವಾಗಿ ಬೆಂಗಳೂರಿನ ವಕೀಲ ಅಶ್ವಿನ್ ಕುಟಿನ್ಹಾ ವಾದ ಮಂಡಿಸಿದರು.
2022ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಬಯೋಕಾನ್ ಮತ್ತು ಸಿಂಜಿನ್ ಇಂಟರ್ ನ್ಯಾಶನಲ್ ಸಂಪರ್ಕಿಸಿ ಸಿಎಸ್‌ಆರ್ ನಿಧಿ ಮೂಲಕ ಮಂಗಳೂರಿನಲ್ಲಿ ಮಿಯಾವಾಕಿ ಅರಣ್ಯವನ್ನು ನಿರ್ಮಿಸಲು ಬೇಡಿಕೆ ಸಲ್ಲಿಸಿತ್ತು. ಇದಕ್ಕಾಗಿ ಪದುವಾ ಜಂಕ್ಷನ್ ಬಳಿ ಜಾಗ ಮಜೂರು ಮಾಡಿತ್ತು. ಬಳಿಕ ವನ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ೀ ಪ್ರದೇಶದಲ್ಲಿ 1000ಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಲಾಗಿತ್ತು.