ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಪ್ರಾದೇಶಿಕವಾಗಿ ಬೆಳೆಯುವ ಗಿಡಗಳನ್ನು ನೆಟ್ಟು ಅತಿ ಕಡಿಮೆ ಜಾಗ, ಸಮಯದಲ್ಲಿ ಕಿರು ಅರಣ್ಯ ಬೆಳೆಸುವ ಪ್ರಯೋಗಕ್ಕೆ ದೊಡ್ಡಬಳ್ಳಾಪುರದ ಯುವಕರ ತಂಡ ಮುಂದಾಗಿದೆ.
ಸಾಮಾನ್ಯವಾಗಿ ಅರಣ್ಯ ಬೆಳೆಯಲು ನೂರಾರು ವರ್ಷಗಳೇ ಬೇಕಾಗುತ್ತದೆ. ಆದರೆ, ಈ ಯುವಕರು ಕೈ ಹಾಕಿರುವ ಸಾಹಸದಲ್ಲಿ 10 ವರ್ಷಗಳಲ್ಲಿ ದಟ್ಟ ಅರಣ್ಯ ನಿರ್ಮಾಣವಾಗಲಿದೆ. ಇದನ್ನು ಮಿಯವಾಕಿ ಮಾದರಿಯ ಪ್ರಯೋಗ ಎಂದು ಕರೆಯಲಾಗಿದೆ.
ಮಿತ್ರಾ ೌಂಡೇಷನ್ ಮತ್ತು ಯುವ ಸಂಚಲನ ಸಂಸ್ಥೆಗಳ ಸಹಯೋಗದಲ್ಲಿ ವನಮಿತ್ರ ಹೆಸರಿನಲ್ಲಿ ಚನ್ನವೀರನಹಳ್ಳಿ ಯುವರಾಜು ಎಂಬುವರ ಜಮೀನಿನಲ್ಲಿ ಗಿಡಗಳನ್ನು ನೆಡಲಾಗಿದೆ.
ಏನಿದು ಮಿಯವಾಕಿ ಮಾದರಿ: ಜಪಾನ್‌ನ ಸಸ್ಯತಜ್ಞ ಮಿಯವಾಕಿ ಪರಿಸರ ಪ್ರೇಮಿಯಾಗಿದ್ದರು. ಇವರು ನಗರ ಪ್ರದೇಶಗಳಲ್ಲಿ ಕಡಿಮೆ ಜಾಗದಲ್ಲಿ ದಟ್ಟ ಅರಣ್ಯ ಬೆಳೆಸುತ್ತಿದ್ದರು. ಈ ಕಾಡುಗಳಲ್ಲಿ ಸೂರ್ಯನ ಕಿರಣಗಳು ನೆಲಕ್ಕೆ ತಾಗುವುದೂ ಕಷ್ಟವಾಗಿತ್ತು. ನೂರು ವರ್ಷದಲ್ಲಿ ನಿರ್ಮಾಣವಾಗುತ್ತಿದ್ದ ಅರಣ್ಯವನ್ನು ಕೇವಲ 10 ವರ್ಷಗಳಲ್ಲಿ ಸೃಷ್ಟಿಸುತ್ತಿದ್ದರು. ಇದುವೇ ಮಿಯವಾಕಿ ಮಾದರಿ ಎಂದು ಜನಪ್ರಿಯವಾಗಿದೆ.
91 ಬಗೆಯ 840 ಗಿಡಗಳು: ನಾಲ್ಕು ಗುಂಟೆ ಜಮೀನಿನಲ್ಲಿ, ಪಶ್ಚಿಮ ಘಟ್ಟಗಳು ಹಾಗೂ ವಿವಿಧ ಕಾಡುಗಳಲ್ಲಿ ಅಳಿವಿನಂಚಿನಲ್ಲಿರುವ 91 ಬಗೆಯ 840 ಸಸಿಗಳನ್ನು ನಾಟಿ ಮಾಡಲಾಗಿದೆ. ಬಿಳಿಗಿರಿ ರಂಗನ ಬೆಟ್ಟದ ಸಮೀಪದಲ್ಲಿರುವ ನರ್ಸರಿಯಿಂದ ಇವುಗಳನ್ನು ಸಸಿಗಳನ್ನು ತರಲಾಗಿದೆ. ಮಣ್ಣಿನ ಗುಣ ಪರಿಶೀಲಿಸಿ, ಕೊಟ್ಟಿಗೆ ಗೊಬ್ಬರ, ಹಸಿರು ಎಲೆ ಗೊಬ್ಬರ ಹಾಕಲಾಗಿದೆ. ಸಾವಯವ ಪದಾರ್ಥಗಳನ್ನು ಮಣ್ಣಿಗೆ ಸೇರಿಸುವ ಮೂಲಕ ಪೋಷಕಾಂಶಗಳ ಕೊರತೆ ನೀಗಿಸಲಾಗಿದೆ. ಒಂದು ಚದರ ಮೀಟರ್ ವ್ಯಾಪ್ತಿಯಲ್ಲಿ 3 ರಿಂದ 4 ಗುಂಡಿಗಳನ್ನು ತೆಗೆದು ಗಿಡ ನೆಡಲಾಗಿದೆ. ಕೇವಲ ಎರಡು ವರ್ಷ ನೀರು ಹಾಕಿ ಪೋಷಿಸಿದರೆ ಅರಣ್ಯ ನಿರ್ಮಾಣವಾಗಿರುತ್ತದೆ ಎಂದು ಯುವ ಸಂಚಲನದ ಅಧ್ಯಕ್ಷ ಚಿದಾನಂದ ಮಾಹಿತಿ ನೀಡಿದರು.
ಅರಣ್ಯ ಎಂದರೆ ನೂರಾರು ಎಕರೆ ವಿಸ್ತೀರ್ಣದಲ್ಲಿರಬೇಕು ಎಂಬ ಕಲ್ಪನೆ ಇದೆ. ಆದರೆ, ಕೃಷಿ ಭೂಮಿಯಲ್ಲೂ ಕಿರು ಅರಣ್ಯ ಬೆಳೆಸಬಹುದಾಗಿದೆ. ಇದರಿಂದ ಅನ್ಯ ಬೆಳೆಗಳಿಗೆ ಕೀಟಗಳ ಹಾವಳಿಯನ್ನೂ ನಿಯಂತ್ರಿಸಬಹುದಾಗಿದೆ. ಕಿರು ಅರಣ್ಯದಲ್ಲಿ ವಿವಿಧ ಬಗೆಯ ಔಷಧೀಯ ಗುಣವುಳ್ಳ ಸಸಿಗಳು ಇವೆ. ಯುವರಾಜ್, ಮಿತ್ರಾ ಫೌಂಡೇಶನ್ ಸದಸ್ಯ
ಕಿರು ಅರಣ್ಯ ಉದ್ದೇಶ: ಪಶ್ಚಿಮ ಘಟ್ಟ ಸೇರಿ ವಿವಿಧ ಕಾಡುಗಳಲ್ಲಿ ಅಳಿವಿನಂಚಿನಲ್ಲಿರುವ ಗಿಡಮರಗಳ ಸಂರಕ್ಷಣೆಯ ಜೊತೆಗೆ ವಿವಿಧ ಜಾತಿಯ ಕೀಟಗಳು, ಪಕ್ಷಿಗಳ ವಾಸಸ್ಥಾನವನ್ನಾಗಿ ಕಿರು ಅರಣ್ಯರೂಪಿಸುವುದು ಈ ಸಂಸ್ಥೆ ಉದ್ದೇಶ. ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶವಾಗಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರು ಕಡಿಮೆ ಇದೆ, ಇಂಥ ಕಡೆ ಮಿತ್ರ ಫೌಂಡೇಶನ್ ಹಾಗೂ ಯುವ ಸಂಚಲನ ಕಿರು ಅರಣ್ಯ ನಿರ್ಮಾಣಕ್ಕೆ ಮುಂದಾಗಿದೆ. ಆಸಕ್ತರು ಸಂಸ್ಥೆಯನ್ನು ಭೇಟಿ ಮಾಡಿದರೆ ಕಿರು ಅರಣ್ಯ ನಿರ್ಮಿಸಿಕೊಡುವ ಉದ್ದೇಶವನ್ನೂ ಸಂಸ್ಥೆ ಹೊಂದಿದೆ ಎಂದು ಯುವ ಸಂಚಲನ ಅಧ್ಯಕ್ಷ ಚಿದಾನಂದ್ ತಿಳಿಸಿದರು.