ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಸ್ವಚ್ಛ ಭಾರತ ಅಭಿಯಾನ, ಪ್ರತಿ ಮನೆಮನೆಗೂ ಶುದ್ಧ ನೀರಿನ ಪೂರೈಕೆಯಂಥ ಕಾರ್ಯಕ್ರಮಗಳು ಕೇವಲ ಕಾರ್ಯಕ್ರಮಗಳಿಗಾಗಿಯೇ ಹೊರತು ಅನುಷ್ಟಾನಗೊಳ್ಳುವುದು ಅಷ್ಟು ಸುಲಭದ ಮಾತಲ್ಲ ಎಂಬ ಆರೋಪ ಕೇಳಿಬರುವುದು ಸಹಜ. ಇದಕ್ಕೆ ಪೂರಕ ಎಂಬಂತಿದೆ ಸೋಮತ್ತನಹಳ್ಳಿ ಗ್ರಾಮ.
ಹೌದು! ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿತ ಗಂಗವಾರ ಚೌಡಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮತ್ತನಹಳ್ಳಿ ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಮುಖ್ಯವಾಗಿ ಕುಡಿವ ನೀರಿಗೆ ಮಲಿನ ಮಿಶ್ರಣವಾಗುತ್ತಿರುವುದು ಕಣ್ಣೆದೆರೇ ಕಾಣುತ್ತಿದ್ದರೂ ಪಂಚಾಯಿತಿ ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಗ್ರಾಮದಲ್ಲಿ ಹಾದು ಹೋಗಿರುವ ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಗೆಟ್‌ವಾಲ್ ಅಳವಡಿಸಿರುವುದು ಎಡವಟ್ಟಿಗೆ ಪ್ರಮುಖ ಕಾರಣವಾಗಿದೆ. ಇದರಿಂದ ದಿನನಿತ್ಯ ಕುಡಿವ ನೀರಿನ ಪೈಪ್‌ನಲ್ಲಿ ಮಲಿನ ನೀರು ಮಿಶ್ರಣವಾಗಿ ಮನೆಮನೆಗೆ ತಲುಪುತ್ತಿದೆ. ಈ ಬಗ್ಗೆ ಹಲವು ಬಾರಿ ಪಂಚಾಯಿತಿ ಸಿಬ್ಬಂದಿ ಗಮನಕ್ಕೆ ತಂದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಜೆಜೆಎಂ ಇಲ್ಲ: ಪ್ರತಿ ಮನೆ ಮನೆಗೂ ಕೊಳಾಯಿ ಮೂಲಕ ಕುಡಿವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆ ಅನುಷ್ಟಾನದಿಂದಲೂ ಈ ಗ್ರಾಮ ವಂಚಿತವಾಗಿದೆ. ಶುದ್ಧ ಕುಡಿವ ನೀರಿರಲಿ ಬರುತ್ತಿರುವ ನೀರಿಗೂ ಸಹ ಮಲಿನ ನೀರು ಮಿಶ್ರಣವಾಗುತ್ತಿದೆ. ಈ ಬಗ್ಗೆ ಗ್ರಾಪಂ ಮೊದಲು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಶುದ್ಧ ನೀರಿನ ಸೇವನೆಯಿಂದ ಹಲವು ಮನೆಗಳಲ್ಲಿ ಮಕ್ಕಳಿಗೆ ಹಾಗೂ ಹಿರಿಯರಿಗೆ ರೋಗಬಾಧೆ ಕಾಣಿಸಿಕೊಂಡಿವೆ. ಜ್ವರ, ನೆಗಡಿ, ಕೆಮ್ಮಿನಂತ ಸಾಂಕ್ರಾಮಿಕ ರೋಗ ಹರಡುತ್ತಿದೆ. ಗ್ರಾಮಸ್ಥರು ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಈಗಲೇ ಗ್ರಾಪಪಂಚಾಯಿತಿಯವರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಎದುರಾಗುವ ಅಪಾಯಕ್ಕೆ ಅವರೇ ಹೊಣೆಗಾರರಾಗಲಿದ್ದಾರೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಚರಂಡಿ ನಿರ್ವಹಣೆಯೂ ಇಲ್ಲ: ಬಹಳ ವರ್ಷಗಳಿಂದ ಈ ಭಾಗದಲ್ಲಿನ ಚರಂಡಿ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಇನ್ನಿತರ ಗ್ರಾಮಗಳಲ್ಲಿ ಕಾಂಕ್ರಿಟ್ ಚರಂಡಿಗಳು ನಿರ್ಮಾಣವಾಗುತ್ತಿದ್ದರೂ ಸೋಮತ್ತನಹಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದೆ. ಕಸಕಡ್ಡಿ ತುಂಬಿಕೊಂಡು ಚರಂಡಿ ನೀರು ಮುಂದಕ್ಕೆ ಹರಿಯದಂತಾಗಿದೆ. ಕಡುಕಪ್ಪು ಬಣ್ಣಕ್ಕೆ ತಿರುಗಿರುವ ಚರಂಡಿಯಲ್ಲಿನ ನಿಂತ ನೀರು ಸೊಳ್ಳೆ ನೊಣಗಳ ಉತ್ಪಾದನಾ ಕೇಂದ್ರವಾಗಿ ರೂಪುಗೊಂಡಿದೆ. ಚರಂಡಿ ಸುತ್ತಲೂ ಗಿಡಗಂಟಿ ಬೆಳೆದು ಸರಿಸೃಪಗಳ ಆವಾಸ್ಥಾನವಾಗಿ ಬಳಕೆಯಾಗುತ್ತಿದೆ. ಗ್ರಾಮದ ಸ್ವಚ್ಛತೆ ಕಾಪಾಡಬೇಕಾದ ಗ್ರಾಮ ಪಂಚಾಯಿತಿ ಸಿಬ್ಬಂದಿ ಮಾತ್ರ ಗಾಢನಿದ್ರೆಯಿಂದ ಎದ್ದೇಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.