ಜಿಲ್ಲೆ

ಸಾರಿಗೆ ನೌಕರರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಮರಿದೇವ ಹೂಗಾರ

ಹುಬ್ಬಳ್ಳಿ: ಸಾರಿಗೆ ನೌಕರ ಮುಷ್ಕರಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಂಗಳವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗ್ಗೆ ಕೆಲ ಹೊತ್ತು ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಆರಂಭವಾಗಲಿಲ್ಲ. ಇದರಿಂದ ಶಾಲಾ-ಕಾಲೇಜ್ ಹಾಗೂ ಇತರ ಕಾರ್ಯ ನಿಮಿತ್ತ ನಗರಕ್ಕೆ ಬರಲು ಜನರು ತೊಂದರೆ ಎದುರಿಸಿದರೆ, ಬಂದವರು ಮರಳಿ ಊರಿಗೆ ಹೋಗಲು ಪರದಾಡಿದರು. ಈ ವೇಳೆ ಖಾಸಗಿ ಬಸ್‌ಗಳಲ್ಲಿ ಬಹಳಷ್ಟು ಜನರು ಪ್ರಯಾಣಿಸಿದರು.

9ಗಂಟೆ ಆಗುತ್ತಿದ್ದಂತೆಯೇ ಆಗೊಮ್ಮೆ ಈಗೊಮ್ಮೆ ನಗರ ಸಾರಿಗೆ ಬಸ್‌ಗಳು ಓಡಾಡಲಾರಂಭಿಸಿದವು. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ, ನಗರ ಹಾಗೂ ಧಾರವಾಡ ವಿಭಾಗದ ಮಾಹಿತಿ ಪ್ರಕಾರ ಬೆಳಗ್ಗೆ 10ರವರೆಗೆ 553 ಬಸ್‌ಗಳಲ್ಲಿ 228 ಬಸ್‌ಗಳು (ಶೇ. 41.23) ಸಂಚರಿಸಿದ್ದವು. ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುವ ಚಿಗರಿ ಬಸ್‌ಗಳು ಬೆಳಗ್ಗೆಯಿಂದ ಓಡಾಟ ನಡೆಸಲಿಲ್ಲ.

ಜನದಟ್ಟಣೆಯಿಂದ ಕೂಡಿರುತ್ತಿದ್ದ ಮಾರುಕಟ್ಟೆಯಲ್ಲಿ ಅಷ್ಟೊಂದು ಜನ ಸಂಚಾರ ಇರಲಿಲ್ಲ. ಅಂಗಡಿ-ಮುಂಗಟ್ಟು ತೆರೆದಿದ್ದರೂ ವಹಿವಾಟು ಕಂಡುಬರಲಿಲ್ಲ. ಕೆಎಂಸಿಆರ್‌ಐಗೆ ಬರುತ್ತಿದ್ದ ರೋಗಿಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿತ್ತು. ಬಸ್ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿದ್ದರಿಂದ ಆಟೋ, ಖಾಸಗಿ ವಾಹನದಲ್ಲಿ ದುಪ್ಪಟ್ಟು ಹಣ ಕೊಟ್ಟು ಜನರು ಪ್ರಯಾಣಿಸಿದರು. ಶಾಲಾ-ಕಾಲೇಜ್‌ಗೆ ಹೋಗುವವರಿಗೆ ಪರ್ಯಾಯವಾಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮೀಣ ಭಾಗಕ್ಕೆ ತೆರಳಲು ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿ ಬಸ್‌ಗಳನ್ನು ಬಿಡಲಾಗುತ್ತಿತ್ತು.

ಮೂರು ಕಡೆ ಬಸ್‌ಗೆ ಕಲ್ಲು: ಗದಗ ರಸ್ತೆಯ ರಿಂಗ್‌ರೋಡ್ ಸಮೀಪ ಹುಬ್ಬಳ್ಳಿಯಿಂದ ಹೊಸಪೇಟೆಗೆ ತೆರಳುತ್ತಿದ್ದ ಬಸ್‌ಗೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ನಡೆದಿದೆ. ಬಸ್ ಮುಂಭಾಗದ ಗಾಜು ಜಖಂಗೊಂಡಿದೆ. ಈ ಬಸ್ ಹೊಸಪೇಟೆ ಘಟಕಕ್ಕೆ ಸೇರಿದೆ. ಬೆಳಗ್ಗೆ 7.15ರ ಸುಮಾರು ಹೊಸೂರಿನ ಪ್ರಾದೇಶಿಕ ಬಸ್ ನಿಲ್ದಾಣದಿಂದ ಹೊರಟಿತ್ತು. ಸುಮಾರು 7.30ರ ವೇಳೆ ರಿಂಗ್ ರೋಡ್ ಬಳಿ ಇಬ್ಬರು ಮುಸುಕುಧಾರಿಗಳು ಕಲ್ಲು ತೂರಿ ಪರಾರಿಯಾಗಿರುವ ಮಾಹಿತಿಯಿದೆ. ಸಾರಿಗೆ ಸಂಸ್ಥೆ ಮುಷ್ಕರದ ಹಿನ್ನೆಲೆಯಲ್ಲಿ ಬಸ್‌ಗೆ ಕಲ್ಲು ತೂರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವಿದ್ಯಾನಗರದಲ್ಲಿ ಧಾರವಾಡಕ್ಕೆ ತೆರಳುತ್ತಿದ್ದ ಬಸ್‌ಗೆ ಹಾಗೂ ಕುಂದಗೋಳ ಕ್ರಾಸ್ ಬಳಿ ಕುಂದಗೋಳಕ್ಕೆ ತೆರಳುತ್ತಿದ್ದ ಬಸ್‌ಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದು, ಇದುವರೆಗೂ ಪ್ರಕರಣ ದಾಖಲಾಗಿಲ್ಲ.

ಐಟಿಐ ವಿದ್ಯಾರ್ಥಿಗಳ ಪರದಾಟ: ಅವಳಿ ನಗರದ ಮೂರು ಐಟಿಐ ಕಾಲೇಜ್‌ಗಳಲ್ಲಿ ಕಂಪ್ಯೂಟರ್ ಬೇಸ್ ಟೆಸ್ಟ್ (ಸಿಬಿಟಿ) ಪರೀಕ್ಷೆ ಇತ್ತು. ಬಹಳಷ್ಟು ಐಟಿಐ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೆ, ಬಸ್ ಸಂಚಾರ ಇಲ್ಲದ್ದರಿಂದ ಖಾಸಗಿ ಬಸ್‌ಗಳನ್ನು ಅವಲಂಬಿಸಿ ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆ ಮುಗಿಸಿ ತಮ್ಮ ಊರಿಗೆ ಮರಳಿದರು.

ಯಾವೊಬ್ಬ ವಿದ್ಯಾರ್ಥಿಯೂ ಪರೀಕ್ಷೆ ತಪ್ಪಿಸಿಕೊಂಡಿಲ್ಲ. ಅನಾರೋಗ್ಯ ನಿಮಿತ್ತ ಇಬ್ಬರು ವಿದ್ಯಾರ್ಥಿಗಳು ಗೈರಾಗಿದ್ದಾರೆ. ಅವರಿಗೆ ಎನ್‌ಎಸಿಇಟಿ ಸೂಚನೆ ಮೇರೆಗೆ ಪರೀಕ್ಷೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಡಿಎಸ್‌ಡಿಒ ರವೀಂದ್ರ ದ್ಯಾಬೇರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.