* ವಾಣಿಜ್ಯ ಬೆಳೆಗೆ ಒತ್ತು
* ಸಾವಯವ ಗೊಬ್ಬರಕ್ಕೆ ಆದ್ಯತೆ
* ವಾಜರಹಳ್ಳಿಯ ಪ್ರಗತಿಪರ ರೈತ ಕೃಷ್ಣಪ್ಪ ಸಾಧನೆ
ಚೇತನ್ ಚಕ್ಕೆರೆ ಬಿಡದಿ
ಸಮಗ್ರ ಕೃಷಿಯೊಂದಿಗೆ ಮಿಶ್ರ ಬೇಸಾಯ ಕೈಗೊಂಡರೆ ಕೃಷಿ ಖಂಡಿತವಾಗಿಯೂ ಲಾಭದಾಯಕವಾಗುತ್ತದೆ ಎಂಬುದನ್ನು ವಾಜರಹಳ್ಳಿಯ ಪ್ರಗತಿಪರ ರೈತ ಕೃಷ್ಣಪ್ಪ ಸಾಧಿಸಿ ತೋರಿಸಿದ್ದಾರೆ.
ತಂದೆಯಿಂದ ಬಳುವಳಿಯಾಗಿ ಬಂದ್ದ ಕೃಷಿ ಭೂಮಿಯಲ್ಲೇ ಖುಷಿ ಕಾಣುವ ಕನಸು ಕಟ್ಟಿಕೊಂಡ ಕೃಷ್ಣಪ್ಪ 5 ಎಕರೆ ಜಮೀನಿನಲ್ಲಿ ವಿವಿಧ ತೋಟಗಾರಿಕೆ ಬೆಳೆ ಬೆಳೆದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ.
ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿ ಆಧುನಿಕ, ಪ್ರಗತಿಪರ ರೈತ ಎಂದು ಗುರುತಿಸಿಕೊಂಡಿದ್ದು, ಇತರ ರೈತರಿಗೆ ಮಾದರಿಯಾಗುವಂತೆ ವ್ಯವಸಾಯ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಕೃಷಿ ಲಾಭದಾಯಕವಲ್ಲ, ಬೆಳೆನಷ್ಟ, ರೋಗ-ರುಜಿನ, ಬೆಲೆ ಕುಸಿತದಿಂದ ಚೇತರಿಸಿಕೊಳ್ಳುವುದೇ ಕಷ್ಟ ಎಂದು ಕೃಷಿಯಿಂದಲೇ ವಿಮುಖರಾಗುವವರ ಮಧ್ಯೆ ರೈತ ಕೃಷ್ಣಪ್ಪ ವಿವಿಧ ತೋಟಗಾರಿಕೆ ಮಿಶ್ರ ಬೆಳೆಗಳಿಂದಲೇ ಹೆಚ್ಚು ಲಾಭ ಕಂಡುಕೊಂಡಿದ್ದಾರೆ.
ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ, ಹಸಿರು ಸೊಪ್ಪು, ಎರೆಹುಳು ಗೊಬ್ಬರ, ಬೇವಿನ ಹಿಂಡಿ ಬಳಸುವುದರಿಂದ ಕೃಷ್ಣಪ್ಪ ಅವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕೆಲ ಬೆಳೆಗಳನ್ನು ವ್ಯಾಪಾರಿಗಳು ತೋಟದ ಬಳಿಯೇ ಬಂದು ಖರೀದಿಸುತ್ತಾರೆ. ಇನ್ನೂ ಕೆಲವು ಬೆಳೆಗಳನ್ನು ಬೆಂಗಳೂರಿನ ಮಾರುಕಟ್ಟೆಗೆ ತೆಗೆದುಕೊಂದು ಹೋಗಿ ಮಾರಾಟ ಮಾಡುತ್ತಾರೆ. ಕೆಲವು ಬೆಳೆಗಳು ವರ್ಷಕ್ಕೆ 3-4 ಬಾರಿ, ಕೆಲವು 2 ಬಾರಿ ಕೆಲವು ಒಂದು ಬಾರಿ ಕೊಯ್ಲಿಗೆ ಬರುತ್ತವೆ. ಹೀಗಾಗಿ ಸದಾ ಒಂದಲ್ಲ ಒಂದು ಬೆಳೆಗಳ ಕೊಯ್ಲು ಆದಾಯದ ಮೂಲವಾಗಿದೆ.
ವಿವಿಧ ಬಗೆಯ ತರಕಾರಿ ಹಾಗೂ ವಾಣಿಜ್ಯ ಬೆಳಗೆ ಒತ್ತು ನೀಡಿರುವ ಕೃಷ್ಣಪ್ಪ, ಏಲಕ್ಕಿ ಬಾಳೆಯನ್ನು ಒಂದು ಎಕರೆಯಲ್ಲಿ ಬೆಳೆದಿದ್ದಾರೆ. ಎರಡು ಎಕರೆಯಲ್ಲಿ ತೊಗರಿಕಾಯಿ ಬೆಳೆದಿದ್ದು, ಉತ್ತಮ ಫಸಲು ಬರುತ್ತಿದೆ. ಇದರೊಂದಿಗೆ ಹೀರೇಕಾಯಿ, ಮೆಣಸಿನಕಾಯಿ, ಉರುಳಿಕಾಯಿ ಸೇರಿ ಇನ್ನಿತರ ಬೆಳೆಗಳನ್ನು ಬೆಳೆದು ಪ್ರತಿದಿನ ಹಣ ನೋಡುತ್ತಿದ್ದಾರೆ. ಎರಡು ಬೋರ್ ವೆಲ್ಗಳಿದ್ದು, ಎಲ್ಲ ಬೆಳೆಗಳಿಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.
ಕೃಷ್ಣಪ್ಪ ಅವರು ಸಮಗ್ರ ಕೃಷಿ ಮಾಡಿ ಮಾದರಿ ರೈತರಾಗಿರುವ ಜತೆಗೆ ರಂಗಭೂಮಿ ಕಲೆಯನ್ನೂ ಮೈಗೂಡಿಸಿಕೊಂಡಿದ್ದಾರೆ. 25ಕ್ಕೂ ಹೆಚ್ಚು ನಾಟಕಗಳಲ್ಲಿ ವಿವಿಧ ಪಾತ್ರ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ಕೃಷಿಯಲ್ಲೂ ಸಮಗ್ರವಾಗಿ ಯೋಜನೆ ರೂಪಿಸಿಕೊಳ್ಳಬೇಕು. ಒಮ್ಮೆಗೇ ಶ್ರೀಮಂತರಾಗಬೇಕು ಎಂಬ ದುರಾಸೆಗೆ ಬೀಳಬಾರದು. ಯಾವುದೋ ಒಂದು ಬೆಳೆಗೆ ಬೆಲೆ ಬಂದಿದೆ ಎಂದು ಎಲ್ಲವನ್ನು ತ್ಯಜಿಸಿ ಒಂದೇ ಬೆಳೆಗೆ ಮಾರುಹೋಗಬಾರದು. ನಾವು ಯಾವುದೇ ಬೆಳೆ ಹಾಕುವ ಮೊದಲು ವೈಜ್ಞಾನಿಕತೆಯನ್ನು ರೂಢಿಸಿಕೊಂಡು ಬೆಳೆ ಬೆಳೆಯಬೇಕು. ಶ್ರಮ ಹಾಗೂ ಶ್ರದ್ಧೆಯಿಂದ ಬೇಸಾಯ ಮಾಡಿದರೆ ಯಾವುದೇ ಕಾರಣಕ್ಕೂ ನಷ್ಟದ ಮಾತು ಬರುವುದಿಲ್ಲ. ಕೃಷ್ಣಪ್ಪ, ಮಾದರಿ ರೈತ
ಸಂಪರ್ಕ ಸಂಖ್ಯೆ- 9845967559,
ಸಂಪರ್ಕಿಸುವ ಸಮಯ ಬೆಳಗ್ಗೆ 10 ರಿಂದ ಸಂಜೆ 6 ಗಂಟೆ