ಟಿ.ಎಚ್.ಶಿವಕುಮಾರ್ ಮಲೇಬೆನ್ನೂರು: ಮಲೇಬೆನ್ನೂರು- ದೇವರಬೆಳಕೆರೆ- ದಾವಣಗೆರೆ ಮಾರ್ಗದ ಮಿಟ್ಲಕಟ್ಟೆ ಗ್ರಾಮದಲ್ಲಿ ಎರಡು ಕಿಲೋ ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಈ ರಸ್ತೆ ಮಿಟ್ಲಕಟ್ಟೆ ಗ್ರಾಪಂ ವ್ಯಾಪ್ತಿಯ ಹತ್ತಾರು ಹಳ್ಳಿಗಳಿಗೆ ಸಂಪರ್ಕಿಸುತ್ತದೆ. ನಿತ್ಯವೂ ಸಾವಿರಾರು ಜನರು ದಾವಣಗೆರೆಗೆ ವಿವಿಧ ಕೆಲಸಗಳಿಗಾಗಿ ಸಂಚರಿಸುತ್ತಾರೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ.
ಕಲ್ಲು-ಮಣ್ಣು, ಜಲ್ಲಿ ಕಲ್ಲು ಮೇಲೆದ್ದಿವೆ. ಡಾಂಬರು ಕಂಡು ದಶಕಗಳೇ ಕಳೆದಿವೆ. ಸಂಚಾರ ದುಸ್ತರವಾಗಿದೆ. ಇದೀಗ ಮಳೆಗಾಲದಲ್ಲಿ ಮಳೆ ನೀರು ರಸ್ತೆ ಮೇಲೆ ಹರಿಯುವ ಕಾರಣ ಹದಗೆಟ್ಟ ಕಿರಿದಾದ ರಸ್ತೆಯಲ್ಲಿ ಪ್ರಯಾಣ ಕಷ್ಟಕರವಾಗಿದೆ.
ಇಲ್ಲಿ ಸಾರಿಗೆ ಬಸ್ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಖಾಸಗಿ ಬಸ್‌ಗಳೇ ಗತಿ. ಶಾಲಾ-ಕಾಲೇಜು ಹಾಗೂ ಆಸ್ಪತ್ರೆಗೆ ತೆರಳಬೇಕಾದರೆ ಹರಸಾಹಸ ಪಡಬೇಕಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸಂಚರಿಸಿದರೂ ಗಮನ ಹರಿಸುತ್ತಿಲ್ಲ. ಇನ್ನಾದರೂ ಈ ರಸ್ತೆ ಅಭಿವೃದ್ಧಿಗೆ ಆದ್ಯತೆ ಕೊಡಲಿ ಎಂಬುದು ನಿಟ್ಟೂರು, ಕುಂಬಳೂರು, ದೇವರಬೆಳಕೆರೆ ಗ್ರಾಮಸ್ಥರು ಒತ್ತಾಯ.
ದಾವಣಗೆರೆ- ಮಲೇಬೆನ್ನೂರು ಮಾರ್ಗದಲ್ಲಿ ಸಾರಿಗೆ ಬಸ್ ಸಂಚಾರ ನಿಂತಿದೆ. ಹೀಗಾಗಿ, ಜನರು ಸ್ವಂತ ವಾಹನದಲ್ಲಿ ಹೆಚ್ಚು ಪ್ರಯಾಣ ಮಾಡುತ್ತಿದ್ದಾರೆ. ಮಿಟ್ಟಕಟ್ಟೆ ಬಳಿ ಇದೀಗ ರಸ್ತೆ ತುಂಬ ಗುಂಡಿಗಳು ಇರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
l ಬೆಳಕೆರೆ ಚಂದ್ರಣ್ಣ, ಮಲೇಬೆನ್ನೂರು.
ರಸ್ತೆ ದುರಸ್ತಿ ಮಾಡಲು ಟೆಂಡರ್ ಆಗಿದೆ. ಒಂದು ವಾರ ಅಥವಾ 15 ದಿನಗಳ ಒಳಗೆ ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ಪತ್ರ ನೀಡಲಾಗುವುದು.
l ಕುಮಾರ್ ನಾಯಕ್, ಎಇಇ, ಪಿಡಬ್ಲುೃಡಿ, ದಾವಣಗೆರೆ.
ಮಲೇಬೆನ್ನೂರು, ದೇವರಬೆಳಕೆರೆ ದಾವಣಗೆರೆ ಮಾರ್ಗದಲ್ಲಿರುವ ಮಿಟ್ಲಕಟ್ಟೆ ಗ್ರಾಮದಲ್ಲಿ ಎರಡು ಕಿಲೋ ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸುವುದಾಗಿ ಹೇಳುತ್ತಿದ್ದಾರೆ. ಸದ್ಯಕ್ಕೆ ಗುಂಡಿ ಮುಚ್ಚುವ ಕೆಲಸ ಆಗಲಿ.
l ಜಿಗಳಿ ಹನುಮಗೌಡ, ಸಾರ್ವಜನಿಕ.