ಜಿಲ್ಲೆ

ಆನಂದ ಕುಮಾರಸ್ವಾಮಿ ಬಹುಶ್ರುತ ವ್ಯಕ್ತಿ: ಶತಾವಧಾನಿ ಡಾ. ಆರ್​. ಗಣೇಶ್​ ಅಭಿಮತ

ಬೆಂಗಳೂರು: ಕಲಾಕಾರ "ಆನಂದ ಕುಮಾರಸ್ವಾಮಿ' ಅವರು 20ನೇ ಶತಮಾನದ ಪ್ರಾರಂಭದ ಕಲಾ ಪ್ರಪಂಚಕ್ಕೆ ನೀಡಿದ ಕೊಡುಗೆ ವಿಶಿಷ್ಟವಾದುದು. ಭಾರತೀಯ ಮೂಲವನ್ನು ಹೊಂದಿ ಶೀಲಂಕಾದ ಸಂಜಾತರಾಗಿದ್ದ ಅವರು ಇಂಗ್ಲೆಂಡ್​ನಲ್ಲಿ ಬೆಳೆದು ಅಮೆರಿಕದ ಬಾಸ್ಟನ್​ ವಸ್ತುಸಂಗ್ರಹಾಲಯದಲ್ಲಿ ಕೆಲಸ ನಿರ್ವಹಿಸಿದರು ಎಂದು ಹಿರಿಯ ವಿದ್ವಾಂಸ ಶತಾವಧಾನಿ ಡಾ. ಆರ್​. ಗಣೇಶ್​ ಹೇಳಿದ್ದಾರೆ.

ದಿ ಮಿಥಿಕ್​ ಸೊಸೈಟಿ ಮತ್ತು ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ ಆಯೋಜಿಸಿರುವ ಆನಂದ ಕುಮಾರಸ್ವಾಮಿ ಅವರ ಜೀವನ ಮತ್ತು ಕೃತಿ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಶನಿವಾರ ಮಾತನಾಡಿದರು.

ಪೌರಾತ್ಯ ಮತ್ತು ಪಾಶ್ಚಿಮಾತ್ಯ ಕಲಾಪ್ರಪಂಚಕ್ಕೆ ಸಂಬಂಧಿಸಿದಂತೆ ಆಳವಾದ ಅಧ್ಯಯನ ನಡೆಸಿದ ಕುಮಾರಸ್ವಾಮಿ ಅವರು ಭಾರತೀಯ ಕಲಾಪರಂಪರೆಯನ್ನು ವಿಶಿಷ್ಟವಾದ ದೃಷ್ಟಿಕೋನದಿಂದ ಅವಲೋಕಿಸಿದರು. ಭಾರತೀಯ ಕಲಾಪರಂಪರೆ ತನ್ನದೇ ಆದ ವೈಶಿಷ್ಟ್ಯತೆಗೆ ಹೆಸರುವಾಸಿಯಾಗಿದ್ದು, ಇಂದಿಗೂ ಮುಂದುವರೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಲಾ ಇತಿಹಾಸಕಾರ ಡಾ. ಚೂಡಾಮಣಿ ನಂದಗೋಪಾಲ್​ ಮಾತನಾಡಿ, ಭೂಗರ್ಭಶಾಸರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದ ಕುಮಾರಸ್ವಾಮಿ, ಭಾರತೀಯ ಕಲೆ ಮತ್ತು ಪರಂಪರೆಯ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದರು. ಇದರ ಅಧ್ಯಯನಕ್ಕಾಗಿ ತಮ್ಮ ಜೀವನವನ್ನು ಮೀಸಲಾಗಿಟ್ಟರು. ಹೀಗಾಗಿ ಅವರನ್ನು ಭಾರತೀಯ ಕಲಾತತ್ವಕಾರ ಎಂದು ಕರೆಯಬಹುದು. ಅವರ ಅಧ್ಯಯನ ಮತ್ತು ಅವರು ಪ್ರಕಟಿಸಿದ ಗ್ರಂಥಗಳು ಇಂದಿಗೂ ಕಲಾ ಇತಿಹಾಸದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಆಕರ ಗ್ರಂಥಗಳಾಗಿವೆ ಎಂದು ತಿಳಿಸಿದರು.

ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಿ. ಮಹೇಂದ್ರ, ಇತಿಹಾಸಕಾರ ಡಾ. ಜಿ.ಬಿ. ಹರೀಶ್​, ದಿ ಮಿಥಿಕ್​ ಸೊಸೈಟಿಯ ಅಧ್ಯಕ್ಷ ಪ್ರೊ.ಕೆ. ನರಹರಿ, ಗೌರವ ಕಾರ್ಯದರ್ಶಿ ವಿ.ನಾಗರಾಜ್​, ಆಡಳಿತ ಮಂಡಳಿ ಸದಸ್ಯ ಪೊ.ಎಂ.ಜಿ. ಚಂದ್ರಕಾಂತ್​ ಮತ್ತಿತರರಿದ್ದರು.