ಮಂಗಳೂರು : ಮೂಡಬಿದಿರೆಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅ್ಯಂಡ್ ಇಂಜಿನಿಯರಿಂಗ್ (ಮೈಟ್), ಸ್ವಾಯತ್ತ
ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಜಲಕ್ಷ್ಮಿ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ರಾಜೇಶ್ ಚೌಟ ಮಾತನಾಡಿ ‘ ಜ್ಞಾನ, ಸೇವೆ ಮತ್ತು ಸಮರ್ಪಣೆ ಯಶಸ್ವಿ ವೃತ್ತಿ ಜೀವನದ ಆಧಾರಸ್ತಂಭಗಳಾಗಿವೆ. ವಿದ್ಯಾರ್ಥಿಗಳು ಸಂಪಾದಿಸುವ ಜ್ಞಾನವು ಕೇವಲ ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಬದಲಾಗಿ ಸಾಮಾಜಿಕ ಪ್ರಯೋಜನ ಮತ್ತು ರಾಷ್ಟ್ರದ ಬೆಳವಣಿಗೆಯ ಉದ್ದೇಶ ಹೊಂದಿರಬೇಕು. ಪದವೀಧರರು ತಮ್ಮ ವೃತ್ತಿ ಜೀವನದುದ್ದಕ್ಕೂ ಸೇವೆಯನ್ನು ಧ್ಯೇಯವಾಕ್ಯವಾಗಿ ಅಳವಡಿಸಿಕೊಳ್ಳಬೇಕು.ಯಶಸ್ಸಿನ ಏಣಿಯನ್ನು ಏರಿದಾಗ, ಆರ್ಥಿಕ ಪ್ರತಿಫಲಗಳು ಸ್ವಾಭಾವಿಕವಾಗಿಯೇ ಬರುತ್ತವೆ’ ಎಂದರು.
ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ ‘ ಶಿಕ್ಷಣ ಸಂಸ್ಥೆಗಳು ಭವಿಷ್ಯದ ನಾಯಕರನ್ನು ಪೋಷಿಸುವ ಜ್ಞಾನದ ಅತ್ಯಂತ ಪವಿತ್ರ ಸ್ಥಳಗಳಾಗಿವೆ .ವಿದ್ಯಾರ್ಥಿಗಳು ಸಮಗ್ರತೆ, ಪ್ರಾಮಾಣಿಕತೆ ಮತ್ತು ನಿರಂತರ ಕಲಿಕೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಆಡಳಿತ ಮಂಡಳಿ ಸದಸ್ಯೆ ರಾಜಲಕ್ಷ್ಮಿ ಚೌಟ ಉಪಸ್ಥಿತರಿದ್ದರು. ಮೈಟ್‌ನ ಪ್ರಾಂಶುಪಾಲ ಡಾ.ಪ್ರಶಾಂತ್.ಸಿ.ಎಂ. ಸ್ವಾಗತಿಸಿ, ಉಪ
ಪ್ರಾಂಶುಪಾಲ ಡಾ.ರಾಜಶೇಖರ್ ವಂದಿಸಿದರು. ಅಧ್ಯಾಪಕಿ ದೀಪ್ತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇಬ್ಬರಿಗೆ ಪಿಎಚ್‌ಡಿ , 671 ಇಂಜಿನಿಯರಿಂಗ್ ಪದವೀಧರರು, 104 ಮ್ಯಾನೇಜ್‌ಮೆಂಟ್ ಪದವೀಧರರು ಮತ್ತು 58 ಎಂಸಿಎ ಪದವೀಧರರಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.