ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ 
ಜಿಲ್ಲೆ

ರಾಜ್ಯ ಸರ್ಕಾರದಿಂದ ಜನರ ತೆರಿಗೆ ದುರ್ಬಳಕೆ : ಎಚ್.ಡಿ. ಕುಮಾರಸ್ವಾಮಿ

ಮೈಸೂರು:ರಾಜ್ಯದಲ್ಲಿ ಅಭಿವೃದ್ಧಿ ಪೂರಕವಾದ ಯೋಜನೆಗಳು ಕಾಣುತ್ತಿಲ್ಲ. ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಲು ಎಲ್ಲ ರೀತಿಯ ಶ್ರಮವನ್ನು ಸರ್ಕಾರ ಪಡುತ್ತಿದೆ. ನಾನು ಅಸೂಹೆ, ಹೊಟ್ಟೆ ಕಿಚ್ಚಿನಿಂದ ಈ ಮಾತಾಡುತ್ತಿಲ್ಲ. ರಾಜ್ಯ ಸರ್ಕಾರದ ದುರಾಡಳಿತದ ಚಿತ್ರಣವನ್ನು ತೆರೆದಿಟ್ಟಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ ಸಂಘದ ಹೆಸರಿನಲ್ಲಿ ಪ್ರತಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಂಘಗಳಿಗೆ 10 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಬರಗಾಲ ಪರಿಸ್ಥಿತಿ ಎದುರಿಸಲು ಹಣ ಬಳಕೆ ಮಾಡದೆ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಜನಸಾಮಾನ್ಯರ ಬಗ್ಗೆ ಇವರು ಎಷ್ಟು ಕಳಕಳಿ ಹೊಂದಿದ್ದಾರೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಜನರು ತಕ್ಕ ಸಮಯದಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಜನರಿಗೆ ವಿವಿಧ ಗ್ಯಾರಂಟಿ ಯೋಜನೆಗಳನ್ನು ನೀಡಿ ಮತ್ತೊಂದೆಡೆ ಬೆಲೆ ಏರಿಕೆ ಮೂಲಕ ಜನರ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹಿರಿಯೂರು ಉಪ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಟಿಕೆಟ್ ಬೇಕು ಎಂದು ಕೇಳಿದ್ದೇವೆ. ಬಿಜೆಪಿ ತಮಗೂ ಬೇಕು ಎನ್ನುತ್ತಿದೆ, ಇಬ್ಬರ ಆಸೆಯೂ ತಪ್ಪಲ್ಲ. ಕೂತು ಚರ್ಚೆ ಮಾಡಿ ಇದನ್ನು ಬಗೆಹರಿಸಿ ಕೊಳ್ಳಬೇಕಿದೆ. ವೈಯಕ್ತಿಕ ಪ್ರತಿಷ್ಠೆಗಿಂತ ಗೆಲವು ಮುಖ್ಯವಾಗಿದೆ. ಒಟ್ಟಾಗಿ ಒಳ್ಳೆಯ ರೀತಿಯಲ್ಲಿ ಹೋದರೆ ಗೆಲವು ಸಿಗುತ್ತದೆ. ಈ ಸರ್ಕಾರದ ಉದ್ದಟತನ, ದೌರ್ಜನ್ಯದಿಂದ ಜನರು ಬೇಸತ್ತು ಹೋಗಿದ್ದಾರೆ. ಹಿರಿಯೂರಿನಲ್ಲಿ ಎನ್‌ಡಿಎ ಗೆಲ್ಲಿಸಲು ಕ್ಷೇತ್ರದ ಮತದಾರರು ಚಿಂತನೆ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಲಿತರಿಗೆ ದೇವಸ್ಥಾನಕ್ಕೆ ಇನ್ನೂ ಪ್ರವೇಶ ಸಿಗುತ್ತಿಲ್ಲ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಪ್ರತಿಕ್ರಿಯಿಸಿದ ಅವರು, ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡಿಸುವ ವಿಚಾರದಲ್ಲಿ ತಂದೆ, ಮಗ ಇಷ್ಟು ವರ್ಷ ಏನು ಮಾಡಿದರು? ದಲಿತರ ಪರ ಧ್ವನಿಯಾಗದೆ ಇವರು ಏನೂ ಕೆಲಸ ಮಾಡಿದರು? ದಲಿತರ ಇವತ್ತಿನ ಸ್ಥಿತಿಗೆ ಈ ತಂದೆ, ಮಕ್ಕಳಂತವರೆ ಕಾರಣ. ಗೃಹ ಸಚಿವರು ತಮ್ಮ ಹುಳುಕು ಮುಚ್ಚಿಕೊಳ್ಳಲು ಯಾವುದೋ ವಿಚಾರಕ್ಕೆ ಇನ್ನೇನೂ ಎಳೆದು ತರುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಜೀವನಚರಿತ್ರೆಯ ಪುಸ್ತಕವನ್ನು ನಾನು ಓದಿಲ್ಲ, ಓದಿದ ಮೇಲೆ ಮಾತಾಡುತ್ತೇನೆ. ಪುಸ್ತಕದ ಬಗ್ಗೆ ನಾನು ಲಘುವಾಗಿ ಮಾತಾಡಲ್ಲ. ಸೋನಿಯಾ ಗಾಂಧಿ ಅವರ ಇಡೀ ಜೀವನದ ಘಟನಾವಳಿ ಎಲ್ಲರಿಗೂ ಗೊತ್ತಿದೆ. ಕೆಲಮೊಮ್ಮೆ ರಾಜಕೀಯವಾಗಿ ಒಳ್ಳೆಯ ನಿರ್ಧಾರ ಮಾಡಿದ್ದಾರೆ, ಅದೇ ರೀತಿ ತಪ್ಪು ನಿರ್ಧಾರವೂ ಮಾಡಿದ್ದಾರೆ ಎಂದರು.

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಂಬದಿ ಸಾಲಿನಲ್ಲಿ ಕೂರಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸದ್ಯ ಅಲ್ಲಿಯಾದರೂ ಅವರನ್ನು ಕೂರಿಸಿದ್ದಾರಲ್ಲ, ಅದೇ ಸಮಧಾನ. ಇಷ್ಟೋತ್ತಿಗೆ ಸಂಪೂರ್ಣವಾಗಿ ಹೊರಗಡೆ ಹಾಕಿ ಬಿಡಬೇಕಿತ್ತು. ಹಾಕಿಲ್ಲ ಎಂಬುದೇ ಸಿದ್ದರಾಮಯ್ಯರ ಪುಣ್ಯ ಎಂದು ವ್ಯಂಗ್ಯವಾಡಿದರು.

ಆರ್‌ಡಿಪಿಆರ್ ಇಲಾಖೆ ಅಧಿಕಾರಿಗಳ ಮೇಲೆ ಇಡಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಡಿ ತನಿಖೆಯಲ್ಲಿ ಅಕ್ರಮ ಹೊರ ಬಂದಿದೆ. ಇಡಿ ಬಂದಿಲ್ಲ ಅಂದಿದ್ದರೆ ಪರೀಕ್ಷಾ ಅಕ್ರಮವನ್ನು ಮುಚ್ಚಿ ಹಾಕುತ್ತಿದ್ದರು. ಈ ಸರ್ಕಾರ ಯಾವುದಕ್ಕೂ ಉತ್ತರ ಕೊಡುತ್ತಿಲ್ಲ. ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡುವ ಭರವಸೆಯೂ ಇಲ್ಲ ಎಂದರು.