ಜಿಲ್ಲೆ

ಕೊಡವ ಲ್ಯಾಂಡ್ ದುರ್ಬಳಕೆ ಸಲ್ಲದು: ಎನ್.ಯು.ನಾಚಪ್ಪ

ಚೆಟ್ಟಳ್ಳಿ: ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ವಾಣಿಜ್ಯ ದುರುದ್ದೇಶಕ್ಕಾಗಿ ಆದಿಮಸಂಜಾತ ಕೊಡವರ ಪವಿತ್ರ ಕೊಡವ ಲ್ಯಾಂಡ್‌ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕಪ್ಪು ಹಣ ಚಲಾವಣೆಯಾಗುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದರು.


ಚೆಟ್ಟಳ್ಳಿ ಪಟ್ಟಣದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದ ಅವರು, ಕಾಫಿ ತೋಟಗಳು ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.


ವಿಶ್ವದಾದ್ಯಂತ ಇರುವ ಆರ್ಥಿಕ ಅಪರಾಧಿಗಳು, ಕಾಳಸಂತೆಕೋರರು ಹಾಗೂ ರಾಜಕೀಯ ನಂಟು ಹೊಂದಿರುವ ಭೂಮಾಫಿಯಾಗಳು ಕಪ್ಪು ಹಣವನ್ನು ಬಿಳಿ ಮಾಡಲು ಕೊಡವ ಲ್ಯಾಂಡ್‌ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೊಡಗಿನಲ್ಲಿ ರೆಸಾರ್ಟ್ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯದಿದ್ದರೂ ಕಾಫಿ ತೋಟಗಳ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಮಾಡಲಾಗುತ್ತಿದೆ. ನಷ್ಟ ತೋರಿಸುವುದಕ್ಕಾಗಿ ರೆಸಾರ್ಟ್‌ಗಳನ್ನು ನಿರ್ಮಿಸುತ್ತಿದ್ದು, ಕಪ್ಪು ಹಣವನ್ನು ಚಲಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


ಅಕ್ರಮ ದಂಧೆಕೋರ ಬಂಡವಾಳಶಾಹಿ ಕಂಪೆನಿಗಳು ಕಾನೂನು ದುರುಪಯೋಗ ಪಡಿಸಿಕೊಂಡು ರಾತೋರಾತ್ರಿ ಪ್ರಭಾವ ಬೀರಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಗಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಸರ್ಕಾರವೇ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ದಂಧೆಕೋರರಿಗೆ ಮಾರ್ಗ ತೋರಿಸುತ್ತಿದೆ. ಜಮೀನನ್ನು ಒಟ್ಟಾಗಿ ಖರೀದಿಸದೆ ಬಿಡಿ ಬಿಡಿಯಾಗಿ ಬೇನಾಮಿ ಹೆಸರಿನಲ್ಲಿ ಖರೀದಿಸಿ ನಂತರ ಭೂಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.


ಈ ಸಂದರ್ಭದಲ್ಲಿ ಪೊರಿಮಂಡ ಧನುದೇವಯ್ಯ, ಪಳಂಗಂಡ ಗೀತಾ ಸುಬ್ಬಯ್ಯ, ಪಳಂಗಂಡ ಸುಮಿಅಪ್ಪಯ್ಯ, ಮುಳ್ಳಂಡ ಸುಶೀಲಾತಮ್ಮಯ್ಯ, ಚೋಳಪಂಡ ಗಂಗಮ್ಮಕಾಳಯ್ಯ, ಕೆಚ್ಚೆಟ್ಟೀರ ರತಿ ಕಾರ್ಯಪ್ಪ, ಅಡಿಕೇರ ಶಾಂತಿಜಯ, ಬಲ್ಲಾರಂಡ ಮಲ್ಲಿಗೆ ಚಿಣ್ಣಪ್ಪ, ಚೋಳಪಂಡ ಜ್ಯೋತಿನಾಣಯ್ಯ, ಲೆ.ಕ. ನಂದಿನೆವಂಡ ಪಾರ್ವತಿ ನಾಚಪ್ಪ ಇತರರು ಹಾಜರಿದರು.