ಗೋಣಿಕೊಪ್ಪ: ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ 79ಎ, 79ಬಿ ದುರುಪಯೋಗವಾಗುತ್ತಿದ್ದು, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ಮೂಲಕ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಆರ್ಥಿಕ ಅಪರಾಧಿಗಳು ಹಾಗೂ ಉದ್ಯಮಿಗಳು ಕೊಡವಲ್ಯಾಂಡ್‌ನ ಪರಿಸರವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದರು.
ಸಿದ್ದಾಪುರದ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ತಿತಿಮತಿಯಲ್ಲಿ ಶನಿವಾರ ಆಯೋಜಿಸಿದ್ದ ಜನಜಾಗೃತಿ ಮಾನವ ಸರಪಳಿ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.
ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಕಪ್ಪು ಹಣ ಹೊಂದಿರುವವರು ವಿಲ್ಲಾ, ಟೌನ್‌ಶಿಪ್‌ಗಳ ನಿರ್ಮಾಣದಲ್ಲಿ ತೊಡಗಿರುವ ಉದ್ಯಮಿಗಳು ಹಾಗೂ ಬಂಡವಾಳಶಾಹಿಗಳು ಇಡೀ ಕೊಡಗಿನಲ್ಲಿ ವ್ಯಾಪಿಸಿಕೊಂಡಿದ್ದಾರೆ. ಚೇಲಾವರ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರು ಬೃಹತ್ ರೆಸಾರ್ಟ್ ನಿರ್ಮಾಣದಲ್ಲಿ ತೊಡಗಿದ್ದರೆ, ಮಲೇಶಿಯಾದ ಉದ್ಯಮಿಯೊಬ್ಬರು ಮೆಗಾ ವಿಲಾ ನಿರ್ಮಿಸುತ್ತಿದ್ದಾರೆ. ಸರ್ಕಾರ ಆದಾಯವನ್ನಷ್ಟೇ ಗುರಿ ಮಾಡಿಕೊಂಡು ಪವಿತ್ರ ಜಾಗವನ್ನು ಮೋಜು, ಮಸ್ತಿಗಾಗಿ ಬಿಟ್ಟುಕೊಡುತ್ತಿದೆ ಎಂದು ಎನ್.ಯು.ನಾಚಪ್ಪ ಸಮಾಧಾನ ವ್ಯಕ್ತಪಡಿಸಿದರು.
ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಬೂಸ್ಟ್ ಮಾಡುವುದಾಗಿ ಜಿಲ್ಲಾಡಳಿತ ಹೇಳಿಕೆ ನೀಡುತ್ತಿದೆ. ಪ್ರವಾಸೋದ್ಯಮದ ಬೆಳವಣಿಗೆ ಎಂದರೆ ಹಸಿರು ಬೆಟ್ಟಗುಡ್ಡಗಳನ್ನು ಕಡಿದು ಜಲನಾಳಗಳನ್ನು ನಾಶಪಡಿಸುವುದೇ? ಎನ್ನುವುದನ್ನು ಶ್ವೇತಪತ್ರದ ಮೂಲಕ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಮತ್ತೊಬ್ಬ ಉದ್ಯಮಿ ತಿತಿಮತಿಯಲ್ಲಿ ಭೂಮಿ ಖರೀದಿಸಿ ಬೃಹತ್ ವಿಲ್ಲಾಗಳನ್ನು ಮತ್ತು ಮೋಜು ಮಸ್ತಿ ಮಾಡಲು ತನ್ನ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಲು ವಿವಿಧೆಡೆ ಜಮೀನು ಖರೀದಿ ಮಾಡಿದ್ದಾರೆ. ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ 79ಎ, 79ಬಿ ದುರುಪಯೋಗವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಂಗೇರ ಪದ್ಮಿನಿ, ಚಿಂಡಮಾಡ ಸರಿತಾ, ಕೂತಂಡ ವಾಣಿ, ಬೋಳ್ತಂಡ ಮೀನಾ, ಕಳ್ಳಿಚಂಡ ಪವಿತ್ರಾ, ಮನೆಯಪಂಡ ಮೊಣ್ಣಪ್ಪ, ಗಾಂಡಂಗಡ ಡಾಲು, ಗಾಂಡಂಗಡ ಕುಟ್ಟಪ್ಪ, ಚೆಕ್ಕೇರ ತಮ್ಮಯ್ಯ, ಮನೆಯಪಂಡ ಅಯ್ಯಪ್ಪ, ಕಮೊಡರ್ ಚೆಕ್ಕೇರ ಬೆಳ್ಯಪ್ಪ, ಮನೆಯಪಂಡ ಭೀಮಯ್ಯ ಮತ್ತಿತರರು ಇದ್ದರು.
6 ಜಿಕೆಪಿ 01: ಧರಣಿ ನಿರತ ಸಿಎನ್‌ಸಿ ಸದಸ್ಯರು