ಮಾನ್ವಿ: ತಾಲೂಕಿನ ಉಟಕನೂರು ಗ್ರಾಪಂಯಲ್ಲಿ 15ನೇ ಹಣಕಾಸು ಯೋಜನೆ ಹಣ ದುರ್ಬಳಕೆ ಆರೋಪದ ಮೇರೆಗೆ ಅಧ್ಯಕ್ಷೆ ಈರಮ್ಮ ಹಾಗೂ ಸದಸ್ಯೆ ಕಾವೇರಿ ಅವರ ಸದಸ್ಯತ್ವ ರದ್ದುಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ 14.47 ಲಕ್ಷ ರೂ. ವೆಚ್ಚದ ಕಾಮಗಾರಿಗಳನ್ನು ಮಾಡದೆ ದುರುಪಯೋಗ ಮಾಡಲಾಗಿತ್ತು.
ಈ ಕುರಿತು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದಿಂದ ತಾಲೂಕು ಯೋಜನಾಧಿಕಾರಿ ಮತ್ತು ತಾಪಂ ಎಡಿಗೆ 2023ರ ಫೆ.24ರಂದು ದೂರು ನೀಡಲಾಗಿತ್ತು. ತನಿಖೆ ನಡೆಸಿದ ಅಧಿಕಾರಗಳು ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿರುವ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಹೀಗಾಗಿ ಹಿಂದಿನ ಗ್ರಾಪಂ ಅಧ್ಯಕ್ಷೆಯಾಗಿದ್ದ ಹಾಲಿ ಸದಸ್ಯೆ ಕಾವೇರಿ ಮತ್ತು ಈಗಿನ ಅಧ್ಯಕ್ಷೆ ಈರಮ್ಮ ಅವರ ಸದಸ್ಯತ್ವ ರದ್ದುಪಡಿಸಲಾಗಿದೆ.
ಅಲ್ಲದೆ 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಸಿ ಆದೇಶಿಸಿದ್ದಾರೆ ಎಂದು ವಾಲ್ಮೀಕಿ ನಾಯಕ ಸಂಘದ ತಾಲೂಕು ಅಧ್ಯಕ್ಷ ಬಸವಲಿಂಗ ನಾಯಕ ಅವರು ಶನಿವಾರ ದಾಖಲೆಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸಂಘದ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದರು.
ಪದಾಧಿಕಾರಿಗಳಾದ ಮಹಾಂತೇಶ ನಾಯಕ, ಭೀಮನಗೌಡ ಉಟಕನೂರು, ಸಿದ್ದಯ್ಯ ಪೂಜಾರಿ, ಕನಕಪ್ಪ ಬೆಳವಾಟ, ಮಾರೆಪ್ಪ, ರಮೇಶನಾಯಕ, ಮಲ್ಲೇಶ ನಾಯಕ ಇತರರಿದ್ದರು.