ಶಿವಮೊಗ್ಗ: ಅಹಂಕಾರ, ದಬ್ಬಾಳಿಕೆಯ ರಾಜಕಾರಣ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಮತದಾನಕ್ಕೆ ಎರಡು ದಿನ ಬಾಕಿ ಇರುವಾಗ ಎಲ್ಲವನ್ನೂ ಬದಲಾಯಿಸುತ್ತೇನೆ ಎನ್ನುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪರೋಕ್ಷವಾಗಿ ಚುನಾವಣಾ ಅಕ್ರಮದ ಸುಳಿವು ನೀಡಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹರಿಹಾಯ್ದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರಿಗೆ ರಾಜಕೀಯದ ಅನುಭವವಿಲ್ಲ. ಈ ಕ್ಷೇತ್ರದ ಪರಿಚಯವಿಲ್ಲ. ಪತ್ನಿ ಪರ ಪ್ರಚಾರ ಮಾಡುತ್ತಿರುವ ಶಿವರಾಜ್‌ಕುಮಾರ್ ಅವರಿಗೆ ಚುನಾವಣೆಯೇ ಅರ್ಥವಾಗುತ್ತಿಲ್ಲ. ಅಕ್ಕನ ಪರವಾಗಿ ಚುನಾವಣೆ ನಡೆಸುತ್ತಿರುವ ಮಧು ಬಂಗಾರಪ್ಪ ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೀತಾ ಹಾಗೂ ಮಧು ಇಡೀ ಚುನಾವಣೆಯಲ್ಲಿ ಬಂಗಾರಪ್ಪ ಹಾಗೂ ರಾಜ್‌ಕುಮಾರ್ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್‌ಕುಮಾರ್ ಅವರಿಗೆ ರಾಜಕೀಯದಲ್ಲಿ ಆಸಕ್ತಿಯಿತ್ತು. ಹೀಗಾಗಿ ಅವರ ಸೊಸೆ ಗೀತಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಎಂಬುದು ಹಸಿ ಸುಳ್ಳು. ರಾಜಕೀಯ ಇಷ್ಟವಿಲ್ಲ ಎಂದು ಅನೇಕ ಬಾರಿ ರಾಜ್‌ಕುಮಾರ್ ಹೇಳಿದ್ದರು. ಅವರು ಮನಸ್ಸು ಮಾಡಿದ್ದರೆ ಸಿಎಂ ಆಗಬಹುದಿತ್ತು ಎಂದು ಕುಮಾರ್ ಹೇಳಿದರು.
ರಾಜಕೀಯ ಯುದ್ಧವಿದ್ದಂತೆ. ಇಲ್ಲಿ ಅಣ್ಣ, ತಮ್ಮ, ತಂಗಿ ಮುಂತಾದ ಸಂಬಂಧಗಳು ನಗಣ್ಯ. ಇಲ್ಲಿ ಗೆಲುವಷ್ಟೇ ಮುಖ್ಯ. ನಾನು ಬಿಜೆಪಿಯವನಾಗಿ ಮಧು ಹಾಗೂ ಗೀತಾ ಅವರ ಬಗ್ಗೆ ಜನರಿಗೆ ತಿಳಿಸಬೇಕಾದ್ದು ನನ್ನ ಕರ್ತವ್ಯ. ನಾನು ತಮ್ಮ, ತಂಗಿ ಎಂದರೂ ಅವರಿಬ್ಬರು ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಅವರಿಗೆ ಕುಟುಂಬದ ಚೌಕಟ್ಟಿನ ಪರಿವೇ ಇಲ್ಲ ಎಂದರು.
ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್, ಜಿಲ್ಲಾ ವಕ್ತಾರ ಎಸ್.ಎಸ್.ಜ್ಯೋತಿಪ್ರಕಾಶ್ ಇತರರಿದ್ದರು.
75 ಲಕ್ಷ ರೂ. ಚೆಕ್ ಎಲ್ಲಿ?:ಬಂಗಾರಪ್ಪ ಅವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಅವಧಿಯಲ್ಲಿ ಅವರಿಗೆ 75 ವರ್ಷವಾಗಿತ್ತು. ಹೀಗಾಗಿ ಆ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಬೆಂಗಳೂರಿನಲ್ಲಿ ಬೃಹತ್ ಸಭೆ ಆಯೋಜಿಸಿ ಬಂಗಾರಪ್ಪ ಅವರನ್ನು ಸನ್ಮಾನಿಸಿ 75 ಲಕ್ಷ ರೂ. ಮೊತ್ತದ ಚೆಕ್ ನೀಡಿದ್ದರು. ಆ ಚೆಕ್ ಎಲ್ಲಿ ಹೋಯ್ತು ಎಂದು ಪರೋಕ್ಷವಾಗಿ ಮಧು ಅವರನ್ನು ಕುಮಾರ್ ಪ್ರಶ್ನಿಸಿದರು.
ಜಾತಿಗಲ್ಲ, ದೇಶಕ್ಕೆ ಮತ:ಈಗ ಮಧು, ಗೀತಾ ಜಾತಿ ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಜಾತಿ ಆಧಾರಿತವಾಗಿ ಚುನಾವಣೆ ನಡೆಯುವುದೇ ತಪ್ಪು. ಈ ಚುನಾವಣೆ ದೇಶದ ಚುನಾವಣೆ. ಮತ ಹಾಕುವುದು ಜಾತಿಗಲ್ಲ, ದೇಶಕ್ಕೆ ಎಂದು ಕುಮಾರ್ ಹೇಳಿದರು. ಕಾಂಗ್ರೆಸ್‌ನವರು ಯಾರೂ ಬಂಗಾರಪ್ಪ ಫೋಟೋ ಬಳಸಲ್ಲ. ಮಧು ಮಾತ್ರ ಬಂಗಾರಪ್ಪ ಫೋಟೋ ತೋರಿಸಿ ರಾಜಕಾರಣ ಮಾಡುತ್ತಾರೆ ಎಂದರು.