ಜಿಲ್ಲೆ

ತಪ್ಪಿಗೆ ಮಾಹಿತಿ ಕೊರತೆ ಕಾರಣ ನೀಡದಿರಿ

Chitradurga

ಚಿತ್ರದುರ್ಗ: ವಿಧಾನಸಭಾ ಚುನಾವಣೆ ವೇಳೆ ಮಾಹಿತಿ ಕೊರತೆಯಿಂದ ತಪ್ಪಾಗಿದೆ ಎಂದು ಯಾರೂ ಸಬೂಬು ಹೇಳಿ, ಹೊಣೆಗಾರಿಕೆಯಿಮದ ಜಾರಿಕೊಳ್ಳಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಾಪ್ರಭು ತಿಳಿಸಿದರು.

ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಹಾಗೂ ಖರ್ಚು ವೆಚ್ಚ ಕುರಿತು ಮಾಧ್ಯಮ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗಾಗಿ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಚುನಾವಣಾ ಆಯೋಗ ಕಾಲಕಾಲಕ್ಕೆ ನೀಡುವ ಸೂಚನೆ ಅನ್ವಯ ಕ್ರಮ ವಹಿಸಲಾಗುವುದು. ಆ ನಿಟ್ಟಿನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಮುಕ್ತ, ಪಾರದರ್ಶಕವಾಗಿ ನಡೆಸಲು ವಿವಿಧ ಅಧಿಕಾರಿ, ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೂ ಖರ್ಚು ವೆಚ್ಚದ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತದೆ. ಸಂದೇಹ ಇದ್ದಲ್ಲಿ ಪರಿಹರಿಸಿಕೊಳ್ಳಬಹುದು ಎಂದರು.

ಚುನಾವಣಾ ಪ್ರಕ್ರಿಯೆ ವೀಕ್ಷಣೆಗೆಂದೇ ಕೇಂದ್ರ ಚುನಾವಣಾ ಆಯೋಗ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಜನರಲ್, ಕಾನೂನು ಸುವ್ಯವಸ್ಥೆ, ಪಾಲನೆ ವೀಕ್ಷಕರು, ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಲಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಎಂ.ಎಸ್.ದಿವಾಕರ್ ಮಾತನಾಡಿ, ಚುನಾವಣೆ ವೇಳೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘಿಸಿ ತೊಂದರೆಗೆ ಒಳಗಾಗಬಾರದು ಎಂಬುದೇ ತರಬೇತಿಯ ಉದ್ದೇಶ. ಮಾಧ್ಯಮ ಪ್ರತಿನಿಧಿಗಳು ಕೂಡ ಉಲ್ಲಂಘನೆಗಳ ಕುರಿತು ವರದಿ ಪ್ರಕಟಿಸಿ, ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿ ಡಿ.ಆರ್.ಮಧು, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರವಿ, ಡಿ.ಎನ್.ಮೈಲಾರಪ್ಪ, ಗೋಪಾಲಸ್ವಾಮಿ ನಾಯಕ ಇತರರಿದ್ದರು.

*ಕೋಟ್

ಚುನಾವಣೆಯಲ್ಲಿ ಒಂದು ಪಕ್ಷ ಇನ್ನೊಂದು ಪಕ್ಷದ ನೀತಿ ನಿಯಮಗಳನ್ನು ವಿಮರ್ಶೆ ಮಾಡಲು ಅವಕಾಶವಿದೆ. ಆದರೆ, ಜಾತಿ, ಧರ್ಮ ನಿಂದಿಸುವಂತಿಲ್ಲ. ಆಧಾರರಹಿತ, ವ್ಯಕ್ತಿಗತ ನಿಂದನೆ ಮಾಡುವಂತಿಲ್ಲ. ಮತದಾರರಿಗೆ ಬೆದರಿಕೆ ಅಥವಾ ಆಮಿಷ ಒಡ್ಡುವಂತಿಲ್ಲ.

ನಾಗಭೂಷಣ್ ತರಬೇತುದಾರ

*ಅಭ್ಯರ್ಥಿ ವೆಚ್ಚ 40 ಲಕ್ಷ ರೂ. ಮಿತಿ

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಗರಿಷ್ಠ 40 ಲಕ್ಷ ರೂ. ಗಳ ವೆಚ್ಚ ಮಿತಿ ನಿಗದಿಪಡಿಸಲಾಗಿದೆ. ಅದನ್ನು ಮೀರಿದಲ್ಲಿ, ನೀತಿ ಸಂಹಿತೆ ಉಲ್ಲಂಘನೆಯಡಿ ಕ್ರಮವಹಿಸಲಾಗುವುದು. ನಿಯಮಾನುಸಾರ ಏನೇ ಉಲ್ಲಂಘನೆಯಾದರೂ ಜೈಲು ಶಿಕ್ಷೆ ಹಾಗೂ ದಂಡನೆಗೆ ಒಳಗಾಗಬೇಕಾಗುತ್ತದೆ ಎಂದು ಸಿಇಒ ದಿವಾಕರ್ ಎಚ್ಚರಿಸಿದರು.