ಜಿಲ್ಲೆ

ಆರೋಗ್ಯವಂತ ಸಮಾಜ ನಿಮಾರ್ಣಕ್ಕೆ ಲಸಿಕೆ ಬಲ: ಜಯಪ್ರಕಾಶ್​ ಹೆಗ್ಡೆ

ಉಡುಪಿ: ಮುಂದಿನ ಜನಾಂಗ ಆರೋಗ್ಯವಂತ ಸಮಾಜ ನಿಮಾರ್ಣ ಮಾಡುವ ನಿಟ್ಟಿನಲ್ಲಿ ಗರ್ಭಿಣಿಯರು ಮತ್ತು -5 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ಅವಶ್ಯಕ ಲಸಿಕೆಗಳನ್ನು ನಿಗಧಿತ ಅವಧಿಯೊಳಗೆ ನೀಡುವ ಅಗತ್ಯವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್​ ಹೆಗ್ಡೆ ಹೇಳಿದರು.

ಸೋಮವಾರ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಸಹಯೋಗದಲ್ಲಿ ನಡೆದ, ಪರಿಣಾಮಕಾರಿ ಮಿಷನ್​ ಇಂದ್ರ ಧನುಷ್​ 5.0 ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ಯಾವುದೇ ರೋಗಗಳು ಕಾಡದಂತೆ ಮತ್ತು ಆರೋಗ್ಯಯುತ ಬೆಳವಣಿಗೆ ಹೊಂದಲು ನಿಗಧಿತ ಅವಧಿಯೊಳಗೆ ಅಗತ್ಯವಿರುವ ಎಲ್ಲಾ ಲಸಿಕೆಗಳನ್ನು ಕೊಡಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ. ಪೋಲಿಯೋ ನಿಮೂರ್ಲನೆ ರೀತಿಯಲ್ಲಿ ದಡಾರ ರೂಬೆಲ್ಲಾ ಸೇರಿದಂತೆ ಮಕ್ಕಳನ್ನು ಕಾಡುವ ಎಲ್ಲಾ ರೋಗಳನ್ನು ಸಂಪೂರ್ಣ ನಿಮೂರ್ಲನೆಗೊಳಿಸಬೇಕಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಹೊಂದಿದ್ದು, ಉತ್ತಮ ವೈದ್ಯಕಿಯ ವ್ಯವಸ್ಥೆ, ವೈದ್ಯರು ಮತ್ತು ಶುಶ್ರೂಶಕ ಸಿಬ್ಬಂದಿ ಇದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಮಕ್ಕಳನ್ನು ಮತ್ತು ಗರ್ಭಿಣಿಯನ್ನು ಕಾಡುವ ಅನೇಕ ಕಾಯಿಲೆಗಳಿಗೆ ಮಿಷನ್​ ಇಂದ್ರ ಧನುಷ್​ ಅಭಿಯಾನದಲ್ಲಿ ನೀಡುವ ಲಸಿಕೆಗಳು ಪರಿಣಾಮಕಾರಿಯಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ, ರೋಗಗಳು ಬಾರದಂತೆ ತಡೆಯಲಿವೆ. ಜಿಲ್ಲೆಯಲ್ಲಿ ಯಾವುದೇ ಅರ್ಹ ಗರ್ಭಿಣಿ ಮತ್ತು ಮಕ್ಕಳು ಈ ಲಸಿಕಾ ಅಭಿಯಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಆರೋಗ್ಯವಂತ ಸಮಾಜ ನಿಮಾರ್ಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ನಗರಸಭೆ ಸದಸ್ಯೆ ಮಾನಸ ಪೈ, ಜಿಲ್ಲಾ ಸರ್ಜನ್​ ಡಾ.ಸುದೇಶ್​ ಕುಮಾರ್​, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜಗೋಪಾಲ ಭಂಡಾರಿ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಸ್ವಾಗತಿಸಿದರು. ಜಿಲ್ಲಾ ಆರ್​.ಸಿ.ಎಚ್​. ಅಧಿಕಾರಿ ಡಾ.ಎಂ.ಜಿ.ರಾಮ ನಿರೂಪಿಸಿದರು. ರೋಟರಿ ಕ್ಲಬ್​ ಅಧ್ಯಕ್ಷೆ ದೀಪಾ ಭಂಡಾರಿ ವಂದಿಸಿದರು.