ಜಿಲ್ಲೆ

ನಾಪತ್ತೆಯಾದ ಯುವತಿ ಮರಳಿ ಮನೆಗೆ

ವೀರೇಶ ಸೌದ್ರಿ

ಭಟ್ಕಳ: ನಾಪತ್ತೆಯಾಗಿದ್ದ ಯುವತಿಯನ್ನು ಉತ್ತರಪ್ರದೇಶದ ಮಥುರಾದಲ್ಲಿ ಪತ್ತೆ ಹಚ್ಚಿದ ಗ್ರಾಮೀಣ ಠಾಣೆ ಪೊಲೀಸರು ಕರೆ ತಂದು ಪಾಲಕರಿಗೆ ಒಪ್ಪಿಸಿದ್ದಾರೆ.

ತಟ್ಟಿಹಕ್ಕಲ್, ಶಿರಾಲಿ ನಿವಾಸಿ 18 ವರ್ಷದ ಜಿಯಾನ ಅಬ್ದುಲ್ ಮುನಾಫ್ ಜು. 18ರಂದು ತಂಗಿಯೊಂದಿಗೆ ಭಟ್ಕಳಕ್ಕೆ ತೆರಳುತ್ತೇನೆಂದು ಹೇಳಿ ಮನೆ ಬಿಟ್ಟು ಹೋಗಿದ್ದಳು. ತಂಗಿಯನ್ನು ಮನೆಗೆ ಕಳುಹಿಸಿ, ನಂತರ ಮನೆಗೆ ಮರಳದೆ ನಾಪತ್ತೆಯಾಗಿದ್ದಳು.

ಪಾಲಕರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಪಿಐ ಮಂಜುನಾಥ ಎ. ಲಿಂಗಾರೆಡ್ಡಿ ಅವರು ತಕ್ಷಣ ಶೋಧ ಕಾರ್ಯ ಆರಂಭಿಸಿದರು. ಯುವತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಾಹಿತಿ ಲಭಿಸಿದ್ದು, ಮೊಬೈಲ್ ಲೊಕೇಶನ್ ಮೂಲಕ ಉತ್ತರ ಪ್ರದೇಶದ ಮಥುರಾದಲ್ಲಿರುವುದು ಪತ್ತೆಯಾಯಿತು.

ಮಥುರಾ ಪೊಲೀಸರ ಸಹಕಾರ ಪಡೆದು, ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳೆಯೊಂದಿಗೆ ಯುವತಿ ತೆರಳಿದ್ದ ಮಾಹಿತಿ ಸಿಕ್ಕಿತು. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆ ಮಹಿಳೆಗೆ ರಾಜಸ್ಥಾನದ ಯುವಕನೊಂದಿಗೆ ಸ್ನೇಹ ಇರುವುದು ತಿಳಿದು ಬಂದಿತ್ತು. ಆದರೆ, ಈಕೆಯೊಂದಿಗೆ ನಾಪತ್ತೆಯಾದ ಯುವತಿ ಪ್ರಯಾಣ ಬೆಳೆಸಿರುವ ಶಂಕೆ ಮೂಡಿತ್ತು.

ಜಿಯಾನಾ ಸ್ವಇಚ್ಛೆಯಿಂದ ಮಹಿಳೆಯೊಂದಿಗೆ ತೆರಳಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಎಎಸ್‌ಐ ರಾಜೇಶ್ ಕೆ., ಸಿಬ್ಬಂದಿ ಅಕ್ಷತ ಕುಮಾರ್, ಸಾವಿತ್ರಿ ಮಥುರಾಗೆ ತೆರಳಿ ಯುವತಿಯನ್ನು ಕರೆತಂದಿದ್ದಾರೆ.