ನಾಪೋಕ್ಲು: ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 9ನೇ ತರಗತಿಯ ವಿದ್ಯಾರ್ಥಿನಿ ನಾಪತ್ತೆಯಾಗಿದ್ದು, ಠಾಣೆಯ ಮುಂದೆ ಜಮಾಯಿಸಿದ ಬಾಲಕಿಯ ಪಾಲಕರು ಹಾಗೂ ಗ್ರಾಮಸ್ಥರು ಪತ್ತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಮರಂದೋಡ ಗ್ರಾಮದ ಚಂಡಿರ ಸುಂದರ ಮತ್ತು ಮೀನಾಕ್ಷಿ ದಂಪತಿ ಪುತ್ರಿ ನಾಪೋಕ್ಲು ನಾ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಬುಧವಾರ ಬೆಳಗ್ಗೆಯಿಂದ ನಾಪತ್ತೆಯಾದ ಬಾಲಕಿ ಸಂಜೆಯಾದರೂ ಮನೆಗೆ ಹಿಂತಿರುಗಿಲ್ಲ. ಈ ಬಗ್ಗೆ ಗ್ರಾಮದಲ್ಲಿ ಹುಡುಕಾಟ ನಡೆಸಿದ್ದು ಬಾಲಕಿ ಪತ್ತೆಯಾಗದ ಕಾರಣ ಪಾಲಕರೊಂದಿಗೆ ಗ್ರಾಮಸ್ಥರು ಬುಧವಾರ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದು ಹಾಗೂ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಪಾಲಕರು, ಗ್ರಾಮಸ್ಥರ ಮನವಿಗೆ ಪೊಲೀಸ್ ಇಲಾಖೆ ಸ್ಪಂದಿಸಿಲ್ಲ. ಶಂಕಿತ ವ್ಯಕ್ತಿಗಳ ದೂರವಾಣಿ ಸಂಖ್ಯೆ ಮತ್ತಿತರ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಬಾಲಕಿಯ ತಂದೆ ಚಂಡಿರ ಸುಂದರ ಮಾತನಾಡಿ, ಪುತ್ರಿ ಬುಧವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದು, ಎಲ್ಲ ಕಡೆ ಹುಡುಕಾಟ ನಡೆಸಿ ಪತ್ತೆಯಾಗದ ಹಿನ್ನೆಲೆಯಲ್ಲಿ ರಾತ್ರಿ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದೇವೆ. ರಾಣಾಧಿಕಾರಿ ಮಂಜುನಾಥ್ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸ್ ಠಾಣೆಯ ಎದುರು ಚಂಡಿರ ಮುದ್ದಪ್ಪ, ಗ್ರಾಮಸ್ಥ ಚಂಡಿರ ಜಗದೀಶ್, ಚಂಡಿರ ರಾಲಿ ಗಣಪತಿ.ಬಾರಿಕೆ ನಂದ,ಚೋಯಮಾಡಂಡ ಮುದ್ದಪ್ಪ, ಚಂಡಿರ ರೋಷನ್ ,ಚಂಡಿರ ದೇವಯ್ಯ ,ಮುಕ್ಕಾಟಿರ ನವೀನ್ ,ಮುಕ್ಕಾಟಿರ ದಯಾನಂದ, ಚಂಡಿರ ವಿಜಯ, ಮುಕ್ಕಾಟಿರ ದಿಲೀಪ್,ಮ0ದ್ರೀರ ಬೆಳ್ಯಪ್ಪ, ಮಂದ್ರೀರ ಸುಂದರಿ, ಮುಕ್ಕಾಟಿರ ರಾಜೇಶ್, ಚಂಡಿರ ತಿಮ್ಮಯ್ಯ , ಚಂಡಿರ ನಂದಕುಮಾರ್, ಮುಕ್ಕಾಟಿರ ದೇವೇಂದ್ರ ಹಾಜರಿದ್ದರು.