ಕಡಬ: ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ಮನೆಯಿಂದ ಟೈಲರ್ ಬಳಿ ಹೋದ ಯುವತಿ ತನ್ನ ಸ್ಕೂಟಿಯನ್ನು ಅರ್ಧದಲ್ಲೇ ನಿಲ್ಲಿಸಿ ನಾಪತ್ತೆಯಾಗಿದ್ದು ಆಕೆಯ ತಂದೆ ಕಡಬ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಾಣಿಯೂರು ಸಮೀಪದ ಚಾರ್ವಾಕ ಗ್ರಾಮದ ಅಂಬುಲ ನಿವಾಸಿ ದೀಕ್ಷಾ (24) ನಾಪತ್ತೆಯಾದ ಯುವತಿ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ ಈಕೆ ರಜೆ ಮಾಡಿ ಜ.1ರಂದು ಊರಿಗೆ ಬಂದು ಮನೆಯಲ್ಲೇ ಉಳಿದುಕೊಂಡಿದ್ದಳು. ಜ.14ರಂದು ಸಂಜೆ ಬಟ್ಟೆ ಹೊಲಿಯಲು ಅಂಗಡಿಗೆ ಹೋಗಿ ಬರುವುದಾಗಿ ಹೋದಾಕೆ ಕತ್ತಲಾದರೂ ಮನೆಗೆ ಬಂದಿರಲಿಲ್ಲ. ಮನೆ ಮಂದಿ ಹುಡುಕಾಡಿದ ಸಂದರ್ಭ ಮನೆಯಿಂದ 1 ಕಿ.ಮೀ ದೂರದ ರಸ್ತೆಯಲ್ಲಿ ಸ್ಕೂಟಿ ಮಾತ್ರ ಪತ್ತೆಯಾಗಿದೆ.
ಆಕೆಯ ಮೊಬೈಲ್‌ಗೆ ಕರೆ ಮಾಡಿದರೂ ಸ್ವಿಚ್ಡ್ ಆಫ್ ಬರುತ್ತಿತ್ತು. ಪರಿಚಯಸ್ಥರಲ್ಲಿ ವಿಚಾರಿಸಿದಾಗ ಆಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬರೀಶ್ ಮತ್ತು ಗೆಳೆಯರ ಬಗ್ಗೆ ಸಂಶಯ ವ್ಯಕ್ತಪಡಿಸಿ ಯುವತಿಯ ತಂದೆ ಚಂದ್ರಶೇಖರ ಅವರು ಕಡಬ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.