ಜಿಲ್ಲೆ

ಕೊಚ್ಚಿ ಹೋದ ಯುವಕ 5 ದಿನದ ಬಳಿ ಪತ್ತೆ

ಜಯತೀರ್ಥ ಪಾಟೀಲ

ಬಸವಕಲ್ಯಾಣ: ಧನ್ನೂರ(ಆರ್) ಗ್ರಾಮ ಸಮೀಪದ ಮುಲ್ಲಾಮರಿ ಹಳ್ಳದಲ್ಲಿ ನಾಲ್ಕು ದಿನದ ಹಿಂದೆ ಕೊಚ್ಚಿ ಹೋಗಿದ್ದ ಯುವಕನ ಶೋಧ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಐದನೇ ದಿನವಾದ ಶುಕ್ರವಾರ ಸಂಜೆ ಶವ ಪತ್ತೆಯಾಗಿದೆ.
ಬೆಳಗ್ಗೆ ೬ರಿಂದ ನಿರಂತರ ೧೨ ಗಂಟೆ ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್) ಜಂಟಿ ಕಾರ್ಯಾಚರಣೆ ನಡೆಸಿ ಯುವಕನ ಶವ ಪತ್ತೆ ಹಚ್ಚಿದ್ದು, ಒಂದೂವರೆ ಕಿಲೋ ಮೀಟರ್ ದೂರ ಹಳ್ಳದ ಬದಿಯಲ್ಲಿರುವ ಹೊಲದ ಮುಳ್ಳಿನ ಕಂಟಿಯಲ್ಲಿ ಶವ ಸಿಕ್ಕಿದೆ.
ಸೋಮವಾರ (ಜು.೨೪) ರಾತ್ರಿ ಗ್ರಾಮದ ಮಲ್ಲಪ್ಪ ಕರೆಪ್ಪನೋರ್ (೨೫) ನೀರಿನಲ್ಲಿ ಕೊಚ್ಚಿ ಹೋಗಿದ್ದ. ಊರ ಹೊರವಲಯದ ಹೊಲದಲ್ಲಿ ಯುವಕನ ಮನೆ ಇದ್ದು, ಕೆಲಸದ ನಿಮಿತ್ತ ಊರಿಗೆ ಬಂದು ವಾಪಸಾಗುವಾಗ ಅವಘಡ ಸಂಭವಿಸಿತ್ತು. ನಿರಂತರ ಮಳೆಯಿಂದ ಗ್ರಾಮದ ಪಕ್ಕದಲ್ಲಿರುವ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಲೆಕ್ಕಿಸದೆ ಮಲ್ಲಪ್ಪ ಮುಂದೆ ಸಾಗಿದ್ದು, ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ.
ಕಲಬುರಗಿಯ ಶರಣಬಸಪ್ಪ ಮಡಿವಾಳ ನೇತೃತ್ವದ ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕದ ದಳದ ತಂಡ ಜಂಟಿಯಾಗಿ ಶುಕ್ರವಾರ ಕಾರ್ಯಾಚರಣೆ ನಡೆಸಿ ಯುವಕನ ಶವ ಪತ್ತೆ ಹಚ್ಚಿದೆ.
ಹಳ್ಳದಲ್ಲಿ ನಾಲ್ಕು ದಿನದಿಂದ ಅಗ್ನಿಶಾಮಕ ಸಿಬ್ಬಂದಿ, ಜಿಲ್ಲಾ ಮಟ್ಟದ ಅಧಿಕಾರಿ ರವೀಂದ್ರ ಘಾಟಗೆ ನೇತೃತ್ವದಲ್ಲಿ ಶೋಧ ನಡೆಸಿದರೂ ಯುವಕನ ಪತ್ತೆಯಾಗಿರಲಿಲ್ಲ. ಹೀಗಾಗಿ ಜಿಲ್ಲಾಡಳಿತ ಎಸ್‌ಡಿಆರ್‌ಎಫ್ ತಂಡ ಕರೆಸಿತ್ತು. ತಂಡಕ್ಕೆ ಅಗ್ನಿಶಾಮಕ ದಳ, ಗ್ರಾಮಸ್ಥರು ಸಾಥ್ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಹಳ್ಳದ ದಡದಲ್ಲಿ ಪಾತಾಳ ಗಡ್ಡಿಯ ಮೂಲಕ ಹುಡುಕಾಟ ನಡೆಸಿದ್ದು, ಎಸ್‌ಡಿಆರ್‌ಎಫ್ ತಂಡ ಹಳ್ಳದಲ್ಲಿ ಬೋಟ್ ಮೂಲಕ ಕಾರ್ಯಾಚರಣೆ ನಡೆಸಿದ್ದು ಫಲ ನೀಡಿದೆ.
ಸಾಂತ್ವನ: ಶಾಸಕ ಡಾ.ಸಿದ್ದು ಪಾಟೀಲ್, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಎಸಿ ರಮೇಶ ಕೋಲಾರ, ತಹಸೀಲ್ದಾರ್ ಶಾಂತಗೌಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಪರಿಶೀಲಿಸಿ ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.