ಹನಗೋಡು ಹೋಬಳಿಯ ಹೆಗ್ಗಂದೂರು ಗ್ರಾ.ಪಂ.ಅಧ್ಯಕ್ಷರಾಗಿ ಆಯ್ಕೆಯಾದ ಸುವರ್ಣಾ ಅವರನ್ನು ಸದಸ್ಯರು ಅಭಿನಂದಿಸಿದರು.  
ಜಿಲ್ಲೆ

ಬಹುಮತವಿದ್ದರೂ ತಪ್ಪಿದ ಅಧ್ಯಕ್ಷ ಸ್ಥಾನ!

ಶಿವಶಂಕರ್ ಎಂ. ಹೆಬ್ಬಳ್ಳ

ಹೆಗ್ಗಂದೂರು ಗ್ರಾಪಂ ಅಧ್ಯಕ್ಷೆಯಾಗಿ ಸುವರ್ಣಾ ಆಯ್ಕೆ

ಹನಗೋಡು: ಬಹುಮತವಿದ್ದರೂ ಸಕಾಲದಲ್ಲಿ ಸೂಕ್ತ ಜಾತಿ ಪ್ರಮಾಣ ಪತ್ರ ಸಲ್ಲಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಎದುರಾಳಿ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಪರೂಪದ ಘಟನೆ ಹೆಗ್ಗಂದೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಹನಗೋಡು ಹೋಬಳಿಯ ಹೆಗ್ಗಂದೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 14 ಸದಸ್ಯರಿದ್ದು, 6 ಸದಸ್ಯ ಬಲ ಹೊಂದಿದ್ದ ಹೊನ್ನೇನಹಳ್ಳಿಯ ಸುವರ್ಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ, 8 ಸದಸ್ಯರ ಬಲ ಹೊಂದಿದ್ದರೂ ಸಕಾಲದಲ್ಲಿ ಬಿಸಿಎಂ-ಎ (ಸಾಮಾನ್ಯ) ಸೂಕ್ತ ಜಾತಿ ಪ್ರಮಾಣ ಪತ್ರ ಸಲ್ಲಿಸದಿದ್ದರಿಂದಾಗಿ ನಾಮಪತ್ರ ತಿರಸ್ಕೃತವಾಯಿತು.

ರವಿಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೆ.8ರಂದು ನಡೆದ ಅಧ್ಯಕ್ಷ ಗಾದಿಯ ಚುನಾವಣೆಗೆ ಹೊನ್ನೇನಹಳ್ಳಿಯ ಸುವರ್ಣಾ ಹಾಗೂ ಹೊಸಕೋಟೆಯ ಮಂಜುಳಮ್ಮ ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರ ಸಲ್ಲಿಸಿದ್ದ ಮಂಜುಳಮ್ಮ ಸೇರಿದಂತೆ 8 ಸದಸ್ಯರು ಚುನಾವಣೆಗೆ ಗೈರಾಗಿದ್ದರು. ಚುನಾವಣಾಧಿಕಾರಿ ನಾಮಪತ್ರ ಹಿಂಪಡೆಯುವ ವೇಳೆವವರೆಗೂ ಸೂಕ್ತ ಜಾತಿ ಪ್ರಮಾಣಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿದ್ದರಾದರೂ ಮಂಜುಳಮ್ಮ ಸಕಾಲದಲ್ಲಿ ಪ್ರಮಾಣಪತ್ರ ಸಲ್ಲಿಸಲಿಲ್ಲ, ಈ ವೇಳೆ ಸಭೆಯಲ್ಲಿದ್ದ 6 ಸದಸ್ಯರು ಸುವರ್ಣಾ ಅವರ ಆಯ್ಕೆ ಘೋಷಿಸುವಂತೆ ಪಟ್ಟು ಹಿಡಿದರು. ಚುನಾವಣೆಗೆ ಕೋರಂ ಕೊರತೆ ಇರುವುದರಿಂದ ಮಂಗಳವಾರಕ್ಕೆ ಚುನಾವಣೆ ಮುಂದೂಡಲಾಗಿತ್ತು. ಈ ವೇಳೆಯೂ 8 ಮಂದಿ ಸದಸ್ಯರು ಗೈರಾಗಿದ್ದರು. ನಿಯಮದ ಪ್ರಕಾರ ಮುಂದೂಡಿದ ಸಭೆಯಾದ್ದರಿಂದ ಕೋರಂ ಅವಶ್ಯಕತೆ ಇಲ್ಲದ್ದರಿಂದ ಸುವರ್ಣಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾದ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಾದೇಶ್ ಘೋಷಿಸಿದರು.

ಪಿಡಿಒ ಪ್ರತಿಭಾ, ಕಾರ್ಯದರ್ಶಿ ಕೆ.ಎನ್.ಪ್ರದೀಪ್ ಕುಮಾರ್ ಇದ್ದರು. ವರಿಷ್ಟರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ರವಿಗೌಡ, ಮುಖಂಡರಾದ ಬಾಲಸುಂದರ್ , ಕೆಂಪೇಗೌಡ, ಸೋಮಶೇಖರ್, ಬಾಲು, ಸಂಜು, ಸತ್ಯಪ್ಪ, ಮಾದೇವ ಸೇರಿದಂತೆ ಇತರರು ಇದ್ದರು.