ಜಿಲ್ಲೆ

ಬೈಕ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಬೆಂಗಳೂರು: ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪುಂಡಾಟ ಮೆರೆದಿರುವ ಘಟನೆ ವಸಂತನಗರದಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ.


ವಸಂತನಗರ ೮ನೇ ಮುಖ್ಯರಸ್ತೆಯ ಮಾರಿಕಾಂಭ ದೇವಾಲಯದ ಬಳಿಯ ನಿವಾಸಿಗಳು ತಮ್ಮ ಮನೆಗಳ ಮುಂದೆ ಎಂದಿನಂತೆ ಶನಿವಾರ ರಾತ್ರಿ ಬೈಕ್‌ಗಳನ್ನು ನಿಲ್ಲಿಸಿದ್ದರು. ಭಾನುವಾರ ಬೆಳಗಿನ ಜಾವ ೫ ಗಂಟೆಗೆ ಬಂದಿರುವ ಕಿಡಿಗೇಡಿಗಳು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ೬ ಬೈಕ್‌ಗಳು ಸುಟ್ಟು ಭಸ್ಮವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಘಟನೆಯ ದೃಶ್ಯಾವಳಿ ಸಿ.ಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಈ ಸುಳಿವು ಆಧರಿಸಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ದ್ವೇಷದ ಕಾರಣಕ್ಕೆ ಬೈಕ್‌ಗಳಿಗೆ ಬೆಂಕಿ ಹಚ್ಚಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.