ಜಿಲ್ಲೆ

ದುಶ್ಚಟ ಬಿಡಿಸಿದ ಸಾಹಸಿ ಸ್ವಾಮೀಜಿ

ಧನಂಜಯ ಎಸ್.ಹಕಾರಿ.

ಮೊಳಕಾಲ್ಮೂರು: ಕುಡಿತದ ಚಟ ಬಿಡಿಸುವ ಸಾಹಸದ ಕೆಲಸಕ್ಕೆ ಪ್ರಾಶಸ್ತ್ಯ ನೀಡಿರುವ ಇಳಕಲ್ ಮಠದ ಸ್ವಾಮೀಜಿ ನಡೆ ಅತ್ಯಂತ ಮಹತ್ವ ಪೂರ್ಣವಾದದ್ದಾಗಿದೆ ಎಂದು ತಹಸೀಲ್ದಾರ್ ಎಂ.ವಿ.ರೂಪಾ ಅಭಿಪ್ರಾಯಪಟ್ಟರು.

ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚಿತ್ತರಗಿ ಇಳಕಲ್ ಮಠದ ಜಗದ್ಗುರು ಡಾ.ಮಹಂತ ಶಿವಯೋಗಿಗಳ ಜನ್ಮ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಆಗಿನ ಕಾಲದಲ್ಲಿ ಸ್ವಾಮೀಜಿ ಸಮಾಜದಲ್ಲಿ ಬೇರೂರಿದ್ದ ಅಜ್ಞಾನ, ಮೌಢ್ಯ ಹಾಗೂ ದುಶ್ಚಟಗಳನ್ನು ಬಿಡಿಸಿ ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದರು ಎಂದರು.

ಇಂತಹ ಸಮಾಜ ಸುಧಾರಕರ ಜಯಂತಿ ಆಚರಣೆಗೆ ಸರ್ಕಾರ ಮುಂದಾಗಿರುವುದು ಅರ್ಥಪೂರ್ಣ ಕಾರ್ಯವಾಗಿದೆ. ಮಹನೀಯರ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಸಿದ್ದಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಇಳಕಲ್ ಮಹಂತ ಸ್ವಾಮೀಜಿ ಪ್ರಜ್ಞಾವಂತ ನಾಗರಿಕ ಸಮಾಜ ನಿರ್ಮಾಣಕ್ಕಾಗಿ ದೊಡ್ಡ ನಿಲುವು ಹೊಂದಿದ್ದರು.

ವಿಶ್ರಾಂತಿ ಲೆಕ್ಕಿಸದೆ ಊರೂರು ಸುತ್ತುತ್ತ ಜನರಲ್ಲಿರುವ ವ್ಯಸನಗಳನ್ನು ದೂರ ಮಾಡಿದರು. ಅರಿವಿನ ಸಂದೇಶ ಸಾರುವ ಮೂಲಕ ಜನ ಜಾಗೃತಿಗೆ ಒತ್ತು ನೀಡಿದರು ಎಂದರು.

ಆ.1ರಂದು ತಾಲೂಕು ಆಡಳಿತ ಸೌಧದಲ್ಲಿ ಇಳಕಲ್ ಮಠದ ಮಹಂತ ಶಿವಯೋಗಿಗಳ ಜನ್ಮದಿನಾಚರಣೆಯನ್ನು ಸ್ಥಳೀಯ ಆಡಳಿತ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು ಎಂದು ಕೋರಿದರು.

ಬಿಇಒ ವಿಜಯಲಕ್ಷ್ಮೀ, ಉಪ ತಹಸೀಲ್ದಾರ್ ಏಳುಕೋಟಿ, ಮಠದ ಕಾರ್ಯದರ್ಶಿ ಕಾಂತರಾಜ್, ಪ್ರಾಚಾರ್ಯ ಗೋವಿಂದಪ್ಪ, ರಮೇಶ್, ವಿನಯ್ ಕುಮಾರ್, ಕೆ.ಬಸಣ್ಣ, ನಾಗೇಂದ್ರಪ್ಪ ಇತರರಿದ್ದರು.