* ನಕಲಿ ಗೈಡ್ ವಿರುದ್ಧ ಹಂಪಿ ಪೊಲೀಸರಿಗೆ ದೂರು
ಹೊಸಪೇಟೆ: ಹಂಪಿ ಪ್ರವಾಸಕ್ಕೆ ಬಂದಿದ್ದ ಮಹಿಳಾ ಪ್ರವಾಸಿಗರೊಂದಿಗೆ ನಕಲಿ ಗೈಡ್‍ವೊಬ್ಬರು ಅನುಚಿತವಾಗಿ ವರ್ತಿಸಿರುವ ಬಗ್ಗೆ ದೂರು ದಾಖಲಾಗಿದೆ. ಹಂಪಿ ನಿವಾಸಿ ಮಾರುತಿ ಎಂಬಾತನ ವಿರುದ್ಧ ಹಂಪಿ ಪ್ರವಾಸಿ ಠಾಣೆಗೆ ದೂರು ನೀಡಲಾಗಿದೆ.
ಮಹಾರಾಷ್ಟ್ರ ಮೂಲದ ಮಹಿಳೆಯರ ಗುಂಪೊಂದು ಶುಕ್ರವಾರ ಹಂಪಿ ವೀಕ್ಷಣೆಗೆ ಆಗಮಿಸಿತ್ತು. ಈ ವೇಳೆ ಮಾರುತಿ ತನ್ನನ್ನು ತಾನು ಪ್ರವಾಸಿ ಮಾರ್ಗದರ್ಶಿ ಎಂದು ಪರಿಚಯಿಸಿಕೊಂಡಿದ್ದು, ವಿವಿಧ ಸ್ಥಳಗಳಿಗೆ ಕರೆದೊಯ್ದಿದ್ದ. ಲೋಟಸ್ ಮಹಲ್ ಬಳಿ ಪ್ರವಾಸಿಗರ ಗುಂಪಿ ಓರ್ವ ಯುವತಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಅದಕ್ಕೆ ಆಕ್ಷೇಪಿಸಿದ್ದಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದರಿಂದ ಆಕ್ರೋಶಗೊಂಡ ಮಹಿಳೆಯರು ಆರೋಪಿಯನ್ನು ಹಿಡಿದು ಪ್ರವಾಸೋದ್ಯಮ ಇಲಾಖೆಗೆ ಆಗಮಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರವಾಸಿಗರ ಲಿಖಿತ ದೂರು ಆದರಿಸಿ, ಕಾನೂನು ಕ್ರಮ ಜರುಗಿಸುವಂತೆ ಹಂಪಿ ಪೊಲೀಸರಿಗೆ ಪತ್ರ ಬರೆಯಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಿಕೇರಿ ಮಾಹಿತಿ ನೀಡಿದರು.