ಜಿಲ್ಲೆ

ಬಿಬಿಎಂಪಿ ರಸ್ತೆಗಳ ಅಭಿವೃದ್ಧಿಯಲ್ಲಿ ಹಣ ದುರ್ಬಳಕೆ: ಲೋಕಾಯುಕ್ತಕ್ಕೆ ಎನ್.ಆರ್. ರಮೇಶ್ ದೂರು

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ ಕಳೆದ 10 ವರ್ಷದಲ್ಲಿ ವಿವಿಧ ಅನುದಾನ ಮೂಲಕ ಒಟ್ಟು 46,292.23 ಕೋಟಿ ರೂ. ಬಿಡುಗಡೆಯಾಗಿದ್ದರೂ, ಹಣವನ್ನು ಸದ್ಬಳಕೆ ಮಾಡಿಕೊಳ್ಳದೆ ದುರ್ಬಳಕೆಯಾಗಿದೆ. ಇದರ ನೇರ ಹೊಣೆ ಪಾಲಿಕೆಯ ಹಿರಿಯ ಅಧಿಕಾರಿಗಳು ಹೊರಬೇಕಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೋರಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವುದಾಗಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ತಿಳಿಸಿದ್ದಾರೆ.

ಈ ಸಂಬಂಧ ಹತ್ತು ವರ್ಷದಲ್ಲಿ ಬಿಡುಗಡೆಯಾಗಿರುವ ಹಣದ ವಿವರ ಹಾಗೂ ರಸ್ತೆಗಳ ಹಾಲಿ ಸ್ಥಿತಿಗತಿ ಕುರಿತು ಮಾಹಿತಿ ಒಳಗೊಂಡ 4,113 ಪುಟಗಳ ದಾಖಲೆಯನ್ನು ಲೋಕಾಯುಕ್ತಕ್ಕೆ ನೀಡಲಾಗಿದೆ. ಹಗರಣದಲ್ಲಿ ಭಾಗಿಯಾಗಿರುವ 10 ವರ್ಷದ ಅವಧಿಯಲ್ಲಿ ಕಾರ್ಯನಿರ್ವಹಿಸಿರುವ ಆಡಳಿತಾಧಿಕಾರಿಗಳು, ಮುಖ್ಯ ಆಯುಕ್ತರು, ಮುಖ್ಯ ಇಂಜಿನಿಯರ್‌ಗಳು, ವಲಯ ಆಯುಕ್ತರು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

2013-14 ರಿಂದ 2023-24ರ ಅವಧಿಯಲ್ಲಿ ಸರ್ಕಾರ ಹಾಗೂ ಬಿಬಿಎಂಪಿಯಿಂದ ವಿವಿಧ ಯೋಜನೆಗಳಡಿ ಹಣ ಬಿಡುಗಡೆಯಾಗಿದೆ. ಈ ಹಣವನ್ನು ಬಳಸಿಕೊಂಡ ಪಾಲಿಕೆಯ ಎಲ್ಲ ರಸ್ತೆಗಳನ್ನು ಚಂದಗೊಳಿಸಬಹುದಿತ್ತು. ಆದರೆ, ಪಾಲಿಕೆ ಆಡಳಿತದಲ್ಲಿ ಭ್ರಷ್ಟಾಚಾರ ನುಸುಳಿರುವುದರಿಂದ ಹಣ ಖರ್ಚಾಗಿದೆಯೇ ಹೊರತು ರಸ್ತೆಗಳು ಸುಧಾರಣೆ ಕಂಡಿಲ್ಲ. ಇಷ್ಟ ಬೃಹತ್ ಮೊತ್ತದ ತೆರಿಗೆ ಹಣದ ಪೋಲು ಆಗಿರುವ ಬಗ್ಗೆ ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಸ್ವಂತ ಪ್ರಯೋಗಾಲಯವೇ ಇಲ್ಲ:

ಪ್ರತೀ ವರ್ಷ ಪಾಲಿಕೆಯ ರಸ್ತೆ ಅಭಿವೃದ್ಧಿಗೆ 7-8 ಸಾವಿರ ಕೋಟಿ ರೂ. ಹಣವನ್ನು ವಿನಿಯೋಗಿಸುತ್ತಿದೆ. ಆದರೂ ಗುಂಡಿಗಳಿಲ್ಲದ ರಸ್ತೆ ಸೌಲಭವನ್ನು ನಾಗರಿಕರಿಗೆ ಕೊಡಲು ಪಾಲಿಕೆಯಿಂದ ಸಾಧ್ಯವಾಗಿಲ್ಲ. ಗುಣಮಟ್ಟದ ರಸ್ತೆ ನಿರ್ಮಿಸಲು ಅಧಿಕಾರಿ ವರ್ಗದಲ್ಲಿ ಇಚ್ಛಾಶಕ್ತಿಯೇ ಇಲ್ಲ. ಡಾಂಬರೀಕರಣಕ್ಕೆ ಬಳಸುವ ಕಚ್ಛಾ ವಸ್ತುಗಳ ಗುಣಮಟ್ಟದ ಪರಿಶೀಲನೆಗೆ ಪ್ರಯೋಗಾಲಯ ಕೂಡ ಹೊಂದಿಲ್ಲ. ವೈಟ್ ಟಾಪಿಂಗ್ ಹೆಸರಿನಲ್ಲಿ ಪ್ರಮುಖ ರಸ್ತೆಗಳಿಗೆ ಆದ್ಯತೆ ನೀಡುತ್ತಿದ್ದರೂ, ಅಲ್ಲೂ ಕಮಿಷನ್ ಹಣ ಪಡೆಯಲು ಟೆಂಡರ್ ಮೊತ್ತವನ್ನು ಹೆಚ್ಚಿಸಲಾಗುತ್ತಿದೆ. ಭ್ರಷ್ಟಾಚಾರ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಬಿಬಿಎಂಪಿಯು ರಸ್ತೆ ಸುಧಾರಣೆ ಕಾರ್ಯವನ್ನು ಸಮರ್ಪಕವಾಗಿ ನಡೆಸುತ್ತಿಲ್ಲ ಎಂದು ಎನ್.ಆರ್.ರಮೇಶ್ ಆರೋಪಿಸಿದರು.