ಜಿಲ್ಲೆ

ಲೋಕಸಭೆ ಚುನಾವಣೆಗೆ ಸರ್ಕಾರದ ಹಣ ದುರ್ಬಳಕೆ

ಕುಮಟಾ: ರಾಜ್ಯ ಕಾಂಗ್ರೆಸ್ ಸರ್ಕಾರ ಹಗರಣಗಳ ಸರ್ಕಾರವಾಗಿದೆ. ದಿನದಿಂದ ದಿನಕ್ಕೆ ಒಂದಕ್ಕಿಂತ ಒಂದು ದೊಡ್ಡ ಹಗರಣಗಳು ಹೊರಬರುತ್ತಿವೆ ಎಂದು ಶಾಸಕ ವಿ.ಸುನೀಲಕುಮಾರ ಹೇಳಿದರು.

ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದ ಜಿಲ್ಲಾ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಗರಣಗಳ ಮೂಲಕ ಲೋಕಸಭೆ ಚುನಾವಣೆಗಾಗಿ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು ದೇಶದಲ್ಲೇ ಪ್ರಥಮ. ತನಿಖೆಯ ಚಾರ್ಜ್‌ಶೀಟ್‌ನಲ್ಲಿ ಇದು ಬಹಿರಂಗಗೊಂಡಿದೆ. ಹೀಗಾಗಿ, ಬಳ್ಳಾರಿ ಸಂಸದರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರಿದೆ ಎಂದರು.

ಗಣೇಶನ ಹಬ್ಬದ ಬಳಿಕ ನಡೆಯುವ ವಿಸರ್ಜನೆಯ ಕಾಲಕ್ಕೆ ಸರಿಯಾಗಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದ್ಧರಾಮಯ್ಯ ಅವರ ವಿಸರ್ಜನೆಯೂ ನಡೆಯಲಿದೆ. ನಾವು ಯಾವತ್ತೂ ಸರ್ಕಾರದ ವಿಸರ್ಜನೆ ಕೇಳಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶವೂ ಇಲ್ಲ. ಸರ್ಕಾರ ಪೂರ್ಣ 5 ವರ್ಷ ಅಧಿಕಾರ ನಡೆಸಲಿ. ಆದರೆ, ಬಯಲಿಗೆ ಬಂದಿರುವ ಹಗರಣಗಳ ಹೊಣೆ ಹೊತ್ತು ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಕೇಳಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ಕೇಳಿದ್ದೇವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರಣಿ ಹೋರಾಟ ಮಾಡಿದ್ದೇವೆ. ಗ್ಯಾರಂಟಿಗಳ ಹೊಂದಾಣಿಕೆಯ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳೇ ಇಲ್ಲದಂತಾಗಿದೆ. ಸರ್ಕಾರದ ಜನವಿರೋಧಿ ನೀತಿ ಮತ್ತು ಆಡಳಿತ ವಿಫಲತೆಯ ವಿರುದ್ಧ ಅಕ್ಟೋಬರ್‌ನಲ್ಲಿ ದೊಡ್ಡ ಅಭಿಯಾನ ಮಾಡಲಿದ್ದೇವೆ ಎಂದರು.

ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿದರು. ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕರಾದ ಸುನೀಲ ಹೆಗಡೆ, ಸುನೀಲ ನಾಯ್ಕ, ಗಿರೀಶ ಪಾಟೀಲ, ಪದಾಧಿಕಾರಿಗಳಾದ ಕುಬೇರಪ್ಪ, ಕೆ.ಜಿ. ನಾಯ್ಕ, ಎಂ.ಜಿ. ನಾಯ್ಕ, ಹರಿಪ್ರಕಾಶ ಕೋಣೆಮನೆ, ಪ್ರಶಾಂತ ನಾಯ್ಕ, ವೆಂಕಟೇಶ ನಾಯಕ ಇತರರು ಇದ್ದರು. ಗುರುಪ್ರಸಾದ ಹೆಗಡೆ ನಿರೂಪಿಸಿದರು. ಮಂಡಲಾಧ್ಯಕ್ಷ ಜಿ.ಐ. ಹೆಗಡೆ ನಿರ್ವಹಿಸಿದರು.