ದೇವರಹಿಪ್ಪರಗಿ ಪಟ್ಟಣದ ರಾವುತರಾಯ ಮಲ್ಲಯ್ಯನ ಜಾತ್ರೆಯ ವಿಹಂಗಮ ನೋಟ. ಜಾತ್ರೆಯಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಕ್ರೀಡಾಪಟು. ಜಾತ್ರೆಯಲ್ಲಿದ್ದ ಚರಕಿ ಗಾಣ ಇತ್ಯಾದಿ ಕ್ರೀಡಾಪರಿಕರಗಳು.
ದೇವರಹಿಪ್ಪರಗಿ : ಪಟ್ಟಣದ ಐತಿಹಾಸಿಕ ರಾವುತರಾಯ ಮಲ್ಲಯ್ಯನ ಜಾತ್ರೆ ಮಹೋತ್ಸವ ನಾಡಿನ ಮೂಲೆ ಮೂಲೆಯಿಂದ ಬಂದ ಲಕ್ಷಾಂತರ ಭಕ್ತರ ಮಧ್ಯೆ ಸಂಭ್ರಮದಿಂದ ಸೋಮವಾರ ಸಂಪನ್ನವಾಯಿತು.
ಪಟ್ಟಣದ ಹೊರ ವಲಯದಲ್ಲಿರುವ ಮಲ್ಲಯ್ಯನ ದೇವಸ್ಥಾನಕ್ಕೆ ಶುಕ್ರವಾರ ಮೆರವಣಿಗೆಯಲ್ಲಿ ತೆರಳಿದ್ದ ರಾವುತರಾಯನಿಗೆ ಭಕ್ತರಿಂದ ತೆಂಗು, ಬಾಳೆ, ಸಕ್ಕರೆ, ಲೋಬಾನ ನೇವೇದ್ಯ ಅರ್ಪಿಸಿದರು.
ನಾಲ್ಕನೇ ದಿನ ಸೋಮವಾರ ಬೆಳಗ್ಗೆ 7 ಗಂಟೆಗೆ ವಿವಿಧ ಪೂಜಾ ಕೈಂಕರ್ಯ ಮುಗಿಸಿಕೊಂಡು ಲಕ್ಷಾಂತರ ಭಕ್ತರ ‘ಏಳು ಕೋಟಿ ಏಳು ಕೋಟಿ ಏಳುಕೋಟಿ’ ಗೆ ಎಂಬ ಜೈಘೋಷದೊಂದಿಗೆ ಭವ್ಯ ಬಂಡಿ ಮೆರವಣಿಗೆ ನಡೆಯಿತು. ಭಕ್ತರು ರಾವುತರಾಯನಿಗೆ ಭಂಡಾರ, ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಮಧ್ಯಾಹ್ನದ ಹೊತ್ತಿಗೆ ಶಿಡಗಟ್ಟಿ ತಲುಪಿದ ನಂತರ ಪಟ್ಟದ ಪೂಜಾರಿ ಕಾರ್ಣಿಕ ನುಡಿದರು. ಸಂಜೆ 5ಕ್ಕೆ ಪಟ್ಟಣದ ಮಧ್ಯಭಾಗದಲ್ಲಿರುವ ಮೂಲ ದೇವಸ್ಥಾನ ತಲುಪಿದ ರಾವುತರಾಯನಿಗೆ ಮುತ್ತೈದೆಯರು, ಹೆಣ್ಣು ಮಕ್ಕಳು ತುಂಬಿದ ಕಳಸದೊಂದಿಗೆ ಆರತಿ ಮಾಡಿದರು.
- ಮಲ್ಲಯ್ಯನ ಕಾರ್ಣಿಕ ನುಡಿ
ಮಳೆ ಚಿತ್ತ, ಸ್ವಾತಿ ಒಂದು ಸರ್ವ ಕೊಡುತ್ತೇನೆ. ಬಿಳಿ ಕಾಳ ಕಟ್ಟಿಗೆ ಹೊಕ್ಕಳ ಆಯಿತು. ಗೋಧಿ, ಕಡಲೆ ಬೆನ್ನು ಹತ್ತಿದವು. ಹತ್ತಿ ಬೆಳೆಯಾಗ ಬಂಗಾರ ಒಗದಿನಿ. ಬಸವಣ್ಣನ ಕಣ್ಣಾಗ ನೀರು ಬಂದರೆ ಕೆಟ್ಟದ್ದು ಆಗತೈತಿ. ಹತ್ತು ಮಂದಿ ಕೂಡಿ ಬಂಡಿ ಎಳೆಯುವರು ಸುರಕ್ಷಿತವಾಗಿ ಸಿಂಹಾಸನಕ್ಕೆ ಮುಟ್ಟುಸರಿ. ರೈತಗ ತುತ್ತು ಮಾಡಿ ಉಣಸ್ತೀನಿ ಬಡವ- ಬಲ್ಲಿದನ ಬಗಲಾಗ ಹಿಡಿದು ಕಾಪಾಡುತ್ತೇನೆ. ಎಷ್ಟು ಹೇಳಿದರೂ ಕೇಳಲಿಲ್ಲ ಕರ್ಮ ಕುಲ ಕುಲ ನಗಲ್ಲಕತ್ತು. ನಾ ಮುಂದು ತಾ ಮುಂದು ಅಂತ ಹೇಳಿ ಸಿಂಹಾಸನಕ್ಕೆ ಮುತ್ತಿಗೆ ಹಾಕಲಾಕತ್ತರ. ಧರ್ಮ ಹಿಡಿದ ನಡೆದವನಿಗೆ ಅಂಗೈಯದೊಳಗಿನ ಅಲ್ಲಿಂಗದಂಗ ಸಂರಕ್ಷಣೆ ಮಾಡತ್ತೇನೆ ಎಂದು ಮಲ್ಲಯ್ಯನ ಕಾರ್ಣಿಕವಾಯಿತು. - ಅನ್ನದಾಸೋಹ
ನಾಲ್ಕು ದಿನದ ಜಾತ್ರೆಯುದ್ದಕ್ಕೂ ನೂರಾರು ಗೆಳೆಯರು ಸೇರಿಕೊಂಡು ಗೆಳೆಯರ ಬಳಗ ರಚಿಸಿ, ಸುತ್ತಲೂ ನಾಲ್ಕೂರು ಕಡೆ ಅನ್ನದಾಸೋಹ ವ್ಯವಸ್ಥೆ ಮಾಡಿದ್ದರು. ರಾಜ್ಯ, ಹೊರ ರಾಜ್ಯದಿಂದ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನ್ನ, ಸಾಂಬಾರ್, ಪವಾವ್, ಸಜ್ಜಕ, ಹುಗ್ಗಿ ವಿತರಿಸಿದ್ದು ಭಕ್ತಾಧಿಗಳ ಮೆಚ್ಚುಗೆಗೆ ಪಾತ್ರವಾಯಿತು. ಇದನ್ನು ಹೊರತುಪಡಿಸಿ ಉದ್ಯಮಿ ರಾಜು ಗುತ್ತೇದಾರ ಶಿರಾ-ಉಪ್ಪಿಟ್ಟು ವ್ಯವಸ್ಥೆ ಮಾಡಿದ್ದರೆ, ಕಾಂಗ್ರೆಸ್ ಮುಖಂಡ ಆನಂದಗೌಡ ದೊಡಮನಿ ಮಾದಲಿ, ಬದನೇಕಾಯಿ ಪಲ್ಯ ಮಾಡಿಸಿ ಉಣ ಬಡಿಸಿದರು.
ಬಂಡೆಪ್ಪ ದಿಂಡವಾರ, ಅಪ್ಪು ಕೋರಿ, ರಮೇಶ ಮಸಬಿನಾಳ, ಮಂಜು ಒಂಟೆತ್ತಿನ, ಕಾಶಿನಾಥ ಸರೂರ, ರಮೇಶ ಹಡಪದ, ಕಾಶಿನಾಥ ಜರಲಿ, ರಮೇಶ ಯರನಾಳ, ಕಶಿಪತಿ ಕುದರಿ ನೂರಾರು ಯುವಕರು ಅನ್ನ ಸಂತರ್ಪಣೆಯ ನೇತೃತ್ವ ವಹಿಸಿಕೊಂಡಿದ್ದರು. - ಭಾರ ಎತ್ತುವ ಸ್ಪರ್ಧೆ
ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಭಾರ ಎತ್ತುವ ಸ್ಪರ್ಧೆಯಲ್ಲಿ ಗ್ರಾಮೀಣ ಭಾಗದ ಸ್ಪರ್ಧಾಳುಗಳು ಭಾಗವಹಿಸಿದ್ದರು. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಮಲಕ್ಕು ಪವಾರ, ಸಾ. ಗೊಣಸಗಿ ಪ್ರಥಮ ಸ್ಥಾನ ಪಡೆದರೆ, ದಶರಥ ರೊಟ್ಟಿ ಯ. ಯಾಳವಾರ ದ್ವಿಈತಯ, ಹಣಮಂತ ಇಂಗಳೇಶ್ವರ ಸಾ. ಮನೂರ ತೃತೀಯ ಸ್ಥಾನ ಪಡೆದರು.
ಗುಂಡು ಎತ್ತುವ ಸ್ಪರ್ಧೆಯಲ್ಲಿ 180 ಕೆಜಿ ತೂಕದ ಗುಂಡುಕಲ್ಲು ಎತ್ತಿ ಬೀರಪ್ಪ ಪೂಜಾರಿ ಪ್ರಥಮ, 170 ಕೆಜಿ ಭಾರ ಎತ್ತಿ ಚಂದ್ರಶೇಖರ ಹಳ್ಳೂರ ದ್ವಿತೀಯ, ಮಾಳಪ್ಪ ಯಾಳಾರ ತೃತೀಯ ಸ್ಥಾನ ಪಡೆದರು. ತೆಕ್ಕೆ ಬಡೆದು ಚೀಲ ಎತ್ತುವ ಸ್ಪರ್ಧೆಯಲ್ಲಿ 210 ಕೆಜಿ ಎತ್ತಿ ಶ್ರೀಕಾಂತ ಕುಂಟೋಜಿ ಪ್ರಥಮ, ಭೀರಪ್ಪ ಪೂಜೇರಿ ದ್ವಿತೀಯ, ಭೀಮಣ್ಣ ಬಳಬಟ್ಟಿ ತೃತೀಯ ಸ್ಥಾನ ಪಡೆದರು.
ಜಾತ್ರೆಯಲ್ಲಿ ಚರಕಿ ಗಾಣ ಸೇರಿದಂತೆ ವಿವಿಧ ಆಟದ ಪರಿಕರಗಳು ಬಂದಿದ್ದು, ಮಕ್ಕಳು, ಪಾಲಕರು ಸಂಭ್ರಮಿಸಿದರು. ರಾಷ್ಟ್ರೀಯ ಹೆದ್ದಾರಿ ಮೇಲೆ ನಡೆಯುವ ಜಾತ್ರೆಯಲ್ಲಿ ಸುಗಮ ಸಂಚಾರಕ್ಕೆ ತೊಂದರೆ ಆಗದಂತೆ ದೇವರಹಿಪ್ಪರಗಿ ಪಿಎಸ್‌ಐ ಆರ್.ವೈ. ಬೀಳಗಿ ನೇತೃತ್ವದಲ್ಲಿ ನೂರಾರು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.