ಜಿಲ್ಲೆ

ಅನುಕಂಪದ ಆಧಾರದಲ್ಲಿ ನೇಜಾರು ಸಂತ್ರಸ್ತೆ ಅಣ್ಣನಿಗೆ ಉದ್ಯೋಗ ನೀಡಲು ಶಿಫಾರಸ್ಸು

ಗೋಪಾಲಕೃಷ್ಣ ಪಾದೂರ್

ಉಡುಪಿ: ಶಾಂತಿ ಪ್ರಿಯ ಜಿಲ್ಲೆಯಲ್ಲಿ ನಾಲ್ಕು ಜನರ ಕ್ರೂರ ಹತ್ಯೆ ನಡೆಸಿದ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಮೃತ ಐನಾಜ್​ ಸಹೋದರ ಅಸಾದ್​ಗೆ ಅನುಕಂಪದ ಆಧಾರದ ಮೇಲೆ ಪೋಲಿಸ್​ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಾರಸ್ಸು ಮಾಡಲಾಗುವುದು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್​ ಅಜೀಮ್​ ಹೇಳಿದರು.


ಮಂಗಳವಾರ ಒಂದೇ ಕುಟುಂಬದ ನಾಲ್ವರ ಹತ್ಯೆ ನಡೆದ ನೇಜಾರುವಿನ ನೂರ್​ ಮೊಹಮ್ಮದ್​ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ಕುಟುಂಬಕ್ಕೆ ನ್ಯಾಯ ಸಿಗಬೇಕು. ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು ಎಂದು ಜನರು ಪೊಲೀಸರ ಬಳಿ ಕೇಳಿಕೊಳ್ಳುತ್ತಿದ್ದಾರೆ. ಕಳೆದು ಹೋಗಿರುವ ಜೀವಗಳು ಸರ್ಕಾರದ ಆಸ್ತಿ. ಕೇಸ್​ ನಡೆಸುವುದರ ಜೊತೆಗೆ ಇಂಡಿಗೋದಲ್ಲಿ ಕೆಲಸ ಮಾಡುತ್ತಿರುವ ಅವರ ಮಗ ಅಸದ್​ ಮೊಹಮ್ಮದ್​ ಬಿ.ಬಿ.ಎಮ್​ ಪೂರೈಸಿದ್ದು, ಅವರಿಗೆ ಪೊಲೀಸ್​ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಲು ಮುಖ್ಯಮಂತ್ರಿಗಳಿಗೆ ಹಾಗೂ ಗೃಹಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಘಟನೆ ನಡೆದ ದಿನದಿಂದಲೂ ಸತತವಾಗಿ ಪೊಲೀಸ್​ ಇಲಾಖೆಯೊಂದಿಗೆ ಸಂಪರ್ಕದಲ್ಲಿದ್ದು, ಸಂಪೂರ್ಣ ಮಾಹಿತಿ ಪಡೆಯಲಾಗಿದೆ. 4 ಜನರ ಕೊಲೆ ನಡೆದ ಸ್ಥಳಗಳನ್ನು ಪರಿಶೀಲನೆ ನಡೆಸಲಾಗಿದೆ. ಆರೋಪಿ ಎಲ್ಲಾ ರೀತಿಯಲ್ಲಿ ಪೂರ್ವ ತಯಾರಿ ಮಾಡಿಕೊಂಡು ಬಂದು ಹತ್ಯೆಗೈದಿರುತ್ತಾನೆ. ಐನಾಜ್​ ದೇಹದ ಮೇಲೆ 10 ರಿಂದ -15 ಬಾರಿ ಚೂರಿಯಿಂದ ಇರಿದಿದ್ದನ್ನು ಗಮನಿಸಿದಾಗ ಆರೋಪಿಯ ಸಿಟ್ಟು, ದ್ವೇಷಗಳನ್ನು ಗಾಯಗಳಿಂದ ಲೆಕ್ಕಹಾಕಬಹುದು. ಸಾಮಾನ್ಯವಾಗಿ ಕೊಲೆ ನಡೆದಾಗ ಐಪಿಸಿ ಸೆಕ್ಷನ್​ 302 ರಡಿ ಪ್ರಕರಣ ದಾಖಲಿಸಲಾಗುತ್ತದೆ. ಪ್ರಕರಣ ಸಾಬೀತಾದಲ್ಲಿ 14 ವರ್ಷ ಜೀವಾವಧಿ ಶಿಕ್ಷೆ ವಿಧಿಸಲಾಗುವುದು. ಇದು ಅಪರೂಪದ ಪ್ರಕರಣವಾಗಿದ್ದು, ಪೊಲೀಸರ ತನಿಖೆಯ ಆಧಾರದ ಮೇಲೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದರು.
ಕೇಸಿನ ಮೇಲ್ವಿಚಾರಣೆಯನ್ನು ಪಶ್ಚಿಮ ವಲಯದ ಐ.ಜಿ.ಪಿ ವಹಿಸಬೇಕು. ಒಂದು ವರ್ಷದೊಳಗೆ ತನಿಖೆ ಮಿಗಿಸಿ, ವಿಶೇಷ ನ್ಯಾಯಾಲಯದ ಮುಂದೆ ದೋಷಾರೋಪಣೆ ಪತ್ರ ಸಲ್ಲಿಸಬೇಕು. ಆಯೋಗದ ವತಿಯಿಂದ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.

ಹತ್ಯೆ ನಡೆದ ದಿನದಂದು ಹಿಂದೂಗಳು ದೀಪಾವಳಿ ಹಬ್ಬವನ್ನೂ ಆಚರಿಸಲಿಲ್ಲ. ನಾವೆಲ್ಲರೂ ಒಂದೇ ಜಾತಿಗೆ ಸೇರಿದವರು ಅದು ಮಾನವ ಜಾತಿ. ಜಿಲ್ಲೆಯ ಜನತೆ ಒಗ್ಗಟ್ಟಾಗಿ, ಈ ಕುಟುಂಬದ ಜೊತೆ ನಿಂತಿರುವುದು ಸಂತಸ ತಂದಿದೆ. ಶಾಂತಿಯುತ ಸಮಾಜವನ್ನು ನಾವು ಬಯಸುತ್ತಿದ್ದು, ಸೌಹಾರ್ದಯುತವಾಗಿ ಜೀವನ ನಡೆಸಬೇಕು. ಉಡುಪಿ ಶಾಂತಿಯುತ ಜಿಲ್ಲೆ. ಇಂತಹ ಘಟನೆಗಳು ಪುನರಾರ್ವನೆಯಾಗದಂತೆ ಕ್ರಮವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎ ಗಫೂರ್​, ಕುಟುಂಬದ ಸದಸ್ಯ ಅಶ್ರಫ್​ ಮೊದಲಾದವರು ಉಪಸ್ಥಿತರಿದ್ದರು.