ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ಮುಖಂಡ ಎಂ.ಸಿ. ಮುಲ್ಲಾ ಸುದ್ದಿಗೋಷ್ಠಿ ನಡೆಸಿದರು. ಜಮೀರ್ ಭಕ್ಷಿ, ಶಬ್ಬೀರ್ ಜಹಾಗೀರದಾರ, ಅಕ್ರಂ ಮಾಶ್ಯಾಳಕರ ಮತ್ತಿತರರಿದ್ದಾರೆ.  
ಜಿಲ್ಲೆ

ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಆಕ್ಸಿಜನ್ ಇದ್ದಂತೆ; ಎಂ.ಸಿ. ಮುಲ್ಲಾ

ವಿಜಯಪುರ: ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಆಕ್ಸಿಜನ್ ಇದ್ದಂತೆ. ಸದಾ ಪಕ್ಷದ ಬೆನ್ನೆಲುಬಾಗಿರುವ ಈ ಸಮುದಾಯ ಸಾಕಷ್ಟು ಅವಕಾಶ ವಂಚಿತವಾಗಿದೆ. ಹೀಗಾಗಿ ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಜಿಲ್ಲೆಯ ಮುಸ್ಲಿಂ ನಾಯಕರಿಗೆ ಅವಕಾಶ ಕಲ್ಪಿಸಬೇಕೆಂದು ಕಾಂಗ್ರೆಸ್ ಮುಖಂಡ ಎಂ.ಸಿ. ಮುಲ್ಲಾ ಸೇರಿದಂತೆ ಹಲವು ಮುಸ್ಲಿಂ ನಾಯಕರು ಆಗ್ರಹಿಸಿದರು.

ಎಂಥದ್ದೇ ಪರಿಸ್ಥಿತಿಯಲ್ಲೂ ಮುಸ್ಲಿಂ ಸಮುದಾಯ ಕಾಂಗ್ರೆಸ್‌ನ ಕೈ ಬಿಟ್ಟಿಲ್ಲ. ಅವಕಾಶಗಳು ಸಿಗದೇ ಇದ್ದಾಗಲೂ ಪಕ್ಷದ ಪರ ನಿಂತಿದೆ. ಆದರೆ, ಹೆಚ್ಚಾಗಿ ದಕ್ಷಿಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲಾಗಿದ್ದು, ಈ ಭಾಗದ ಮುಸ್ಲಿಂ ನಾಯಕರು ಅವಕಾಶ ವಂಚಿತರಾಗುತ್ತಲೇ ಬಂದಿದ್ದಾರೆ. ಈ ಬಾರಿಯಾದರೂ ಅರ್ಹರಿಗೆ ಅವಕಾಶ ಕಲ್ಪಿಸಲು ಜಿಲ್ಲೆಯ ಹಾಗೂ ರಾಜ್ಯದ ನಾಯಕರು ಮನಸ್ಸು ಮಾಡಬೇಕೆಂದು ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ಎಲ್ಲ ಸಮುದಾಯಗಳಿಗೂ ಜನಪ್ರತಿನಿಧಿಗಳಿದ್ದಾರೆ, ಆದರೆ ಶಾಸನಸಭೆಯಲ್ಲಿ ವಿಜಯಪುರದ ಯಾವೊಬ್ಬ ಮುಸ್ಲಿಂರೂ ಇಲ್ಲ, ಹೀಗಾಗಿ ಈ ಒಂದು ಅವಕಾಶ ನೀಡಬೇಕು. ಇದು ಕೇವಲ ಅಲ್ಪಸಂಖ್ಯಾತ ಮುಸ್ಲಿಂ ಮುಖಂಡರ ಒತ್ತಾಯವಲ್ಲ, ಬದಲಿಗೆ ಮುಸ್ಲಿಂ ಸಮುದಾಯದ ಒಕ್ಕೋರಲಿನ ಒತ್ತಾಯವಾಗಿದೆ, ಎಲ್ಲ ಸಮುದಾಯಗಳಿಗೂ ಕಾಂಗ್ರೆಸ್ ಪಕ್ಷ ನ್ಯಾಯ ಒದಗಿಸಿದೆ, ಆದರೆ ಅವಕಾಶ ವಂಚಿತವಾಗಿರುವ ಮುಸ್ಲಿಂ ಸಮಾಜಕ್ಕೆ ಈ ಅವಕಾಶ ನೀಡಿದರೆ ಸಾಮಾಜಿಕ ನ್ಯಾಯ ಪರಿಪೂರ್ಣವಾಗುತ್ತದೆ ಎಂದರು.

ಇಂಥದ್ದೇ ನಾಯಕರಿಗೆ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯವೇನಿಲ್ಲ. ಪಕ್ಷ ಅರ್ಹರನ್ನು ಗುರುತಿಸಿ ಅವಕಾಶ ನೀಡಬೇಕು. ಜಿಲ್ಲೆಯಲ್ಲಿ ಅನೇಕ ಸಮರ್ಥ ನಾಯಕರಿದ್ದಾರೆ. ಅವರಲ್ಲಿ ಯಾರಾದರೂ ಒಬ್ಬರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಭಕ್ಷಿ, ಮುಖಂಡರಾದ ಶಬ್ಬೀರ್ ಜಹಾಗೀರದಾರ, ಅಕ್ರಂ ಮಾಶ್ಯಾಳಕರ, ಫಯಾಜ್ ಕಲಾದಗಿ, ದಸ್ತಗೀರ ಸಾಲೋಟಗಿ ಮತ್ತಿತರರಿದ್ದರು.