ಬೆಳಗಾವಿ: ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದ್ದ ಪ್ರವಾಸೋದ್ಯಮ ಇಲಾಖೆ ಬೆಳಗಾವಿ ವಿಭಾಗೀಯ ಕಚೇರಿ ಉಪ ನಿರ್ದೇಶಕರ ಹುದ್ದೆಯನ್ನು ದಕ್ಷಿಣ ಕನ್ನಡಕ್ಕೆ ಸ್ಥಳಾಂತರಿಸಲು ಸರ್ಕಾರ ಮುಂದಾಗಿದೆ. ಲಾಕ್‌ಡೌನ್ ಸಂದರ್ಭ ಸದ್ದಿಲ್ಲದೆ ಈ ಕಾರ್ಯ ಕೈಗೆತ್ತಿಕೊಂಡ ಸರ್ಕಾರದ ಕ್ರಮವನ್ನು ಈ ಭಾಗದ ಜನರು ಖಂಡಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ಬೆಳಗಾವಿಯಲ್ಲಿದ್ದ ಕೆಶಿಫ್ ಕಚೇರಿ, ಬೆಳಗಾವಿಯಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಆಯುಷ್ ಲಸಿಕಾ ಘಟಕವನ್ನೂ ಸ್ಥಳಾಂತರಿಸಿತ್ತು. ಅಲ್ಲದೆ, ಉತ್ತರದಲ್ಲಿ ಹೋರಾಟದ ಕಾವು ಹೆಚ್ಚಾಗಿದ್ದರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಳಾಂತರ ನಿರ್ಧಾರದಿಂದ ಹಿಂದೆ ಸರಿದಿತ್ತು. ಆದರೆ, ಈಗಿನ ಸರ್ಕಾರ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರ ಹುದ್ದೆಗೆ ಕತ್ತರಿ ಹಾಕಿ, ಸಹಾಯಕ ನಿರ್ದೇಶಕರನ್ನು ನೇಮಿಸುವ ಮೂಲಕ ಒಂದೇ ಜಿಲ್ಲೆಗೆ ಕಚೇರಿ ಸೀಮಿತಗೊಳಿಸುತ್ತಿರುವುದು ಇಲ್ಲಿನವರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವಾಸೋದ್ಯಮಕ್ಕೆ ಪೆಟ್ಟು: ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಬೆಳಗಾವಿ ವಿಭಾಗೀಯ ಕಚೇರಿ ವ್ಯಾಪ್ತಿಗೆ ಒಳಪಟ್ಟಿವೆ. 200ಕ್ಕಿಂತ ಅಧಿಕ ಪ್ರವಾಸಿ ತಾಣಗಳು ಈ ವ್ಯಾಪ್ತಿಯಲ್ಲಿವೆ. ಬೆಳಗಾವಿಯ ರೇಣುಕಾ ಯಲ್ಲಮ್ಮ ದೇವಸ್ಥಾನ, ಗೋಕಾಕ ಜಲಪಾತ, ಗೊಡಚಿನಮಲ್ಕಿ ಜಲಪಾತ, ವಿಜಯಪುರದ ಗೋಳಗುಮ್ಮಟ, ಆಲಮಟ್ಟಿ ಜಲಾಶಯ, ಬಾಗಲಕೋಟೆಯ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಗದುಗಿನ ಲಕ್ಕುಂಡಿಗೆ ವರ್ಷವಿಡೀ ಪ್ರವಾಸಿಗರು ಆಗಮಿಸುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಹತ್ತಾರು ಜಲಪಾತಗಳು, ಕರಾವಳಿಯ ತಾಣಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಇದೀಗ ಬೆಳಗಾವಿ ವಿಭಾಗೀಯ ಕಚೇರಿಯನ್ನು ಸ್ಥಳಾಂತರಿಸಿದರೆ ಇಲ್ಲಿನ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲಿದೆ ಎನ್ನುತ್ತಾರೆ ಕನ್ನಡ ಹೋರಾಟಗಾರ ದೀಪಕ ಗುಡಗನಟ್ಟಿ.
ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡಕ್ಕೆ ಮಂಜೂರಾದ ಸಹಾಯಕ ನಿರ್ದೇಶಕ ಹುದ್ದೆ ಬೆಳಗಾವಿಗೆ ವರ್ಗಾಯಿಸಿ, ಬೆಳಗಾವಿಯ ಉಪ ನಿರ್ದೇಶಕ ಹುದ್ದೆ ದಕ್ಷಿಣ ಕನ್ನಡಕ್ಕೆ ಸ್ಥಳಾಂತರಿಸುವಂತೆ ಮೇ 4ರಂದು ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ತಾವು ಪ್ರಭಾರ ಉಪ ನಿರ್ದೇಶಕ ಹುದ್ದೆಯಲ್ಲಿ ಮುಂದುವರಿಯಬೇಕೋ? ಸಹಾಯಕ ನಿರ್ದೇಶಕರಿಗೆ ಅಧಿಕಾರ ಬಿಟ್ಟುಕೊಡಬೇಕೋ? ಅಥವಾ ಇಲ್ಲಿನ ಸಿಬ್ಬಂದಿಯನ್ನೂ ವರ್ಗಾಯಿಸುತ್ತೀರೋ ಎಂದು ಪ್ರಭಾರ ಉಪ ನಿರ್ದೇಶಕ ಸುಭಾಸ ಉಪ್ಪಾರ ಅವರು ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಗಡಿ ಭಾಗದಲ್ಲಿರುವ ಬೆಳಗಾವಿ ಆಯಕಟ್ಟಿನ ಜಿಲ್ಲೆ. ಇದೇ ಕಾರಣಕ್ಕೆ 14 ತಾಲೂಕುಗಳಿದ್ದರೂ ಜಿಲ್ಲಾ ವಿಭಜನೆ ಮಾಡಿಲ್ಲ. ಸುವರ್ಣ ವಿಧಾನಸೌಧವೂ ಇರುವ ಕಾರಣ ಅಲ್ಲಿ ಪ್ರವಾಸೋದ್ಯಮ ಇಲಾಖೆ ವಿಭಾಗೀಯ ಕಚೇರಿ ಅಗತ್ಯ. ಇಲಾಖೆ ಉಪ ನಿರ್ದೇಶಕರ ಹುದ್ದೆ ದಕ್ಷಿಣ ಕನ್ನಡಕ್ಕೆ ಸ್ಥಳಾಂತರಿಸುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನವೊಲಿಸಿ ಆದೇಶ ರದ್ದುಗೊಳಿಸಲು ಪ್ರಯತ್ನಿಸುವೆ.| ಸಿ.ಟಿ. ರವಿ ಪ್ರವಾಸೋದ್ಯಮ ಸಚಿವನಮ್ಮ ಕಚೇರಿಗೆ ಸಹಾಯಕ ನಿರ್ದೇಶಕರಾಗಿ ಜಗದೀಶ ಪಾಟೀಲ ಅವರನ್ನು ನೇಮಕ ಮಾಡಿರುವುದಾಗಿ ತಿಳಿದುಬಂದಿದೆ. ಆದರೆ, ನನಗೆ ಬೇರೆಡೆ ಹುದ್ದೆ ತೋರಿಸಿಲ್ಲ. ಇಲಾಖೆ ಮುಖ್ಯಸ್ಥರು ನೀಡುವ ನಿರ್ದೇಶನ ಪಾಲಿಸುತ್ತೇನೆ.| ಸುಭಾಸ ಉಪ್ಪಾರ, ಪ್ರಭಾರ ಉಪ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಬೆಳಗಾವಿ ವಿಭಾಗಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿಯಾಗಿ ವಿಭಾಗೀಯ ಕಚೇರಿ ತೆರೆದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಇಲ್ಲಿನ ಉಪ ನಿರ್ದೇಶಕರ ಹುದ್ದೆ ಅಲ್ಲಿಗೆ ಸ್ಥಳಾಂತರಿಸುವುದು ಏಕೆ? ಸರ್ಕಾರ ಈ ನಿರ್ಧಾರ ಕೈಬಿಡಬೇಕು. ಸಾಧ್ಯವಾದರೆ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಚೇರಿಯನ್ನೇ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. | ಅಶೋಕ ಚಂದರಗಿ, ಅಧ್ಯಕ್ಷ, ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ
| ಇಮಾಮಹುಸೇನ್ ಗೂಡುನವರ, ಬೆಳಗಾವಿ