ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ ಕೆ.ಸುಧಾಕರ್ ಕಾಂಗ್ರೆಸ್ ಸೇರ್ಪಡೆಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು, ಪಕ್ಷದ ಪದಾಧಿಕಾರಿಗಳು ಅಭಿಪ್ರಾಯವನ್ನು ಸಂಗ್ರಹಿಸಿ, ಬಳಿಕ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆದರೆ, ಇಂತಹ ಸಂದಿಗ್ಧ ಸ್ಥಿತಿ ಬರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ತಿಳಿಸಿದರು.
ಬಿಜೆಪಿ ಹೇಳುವ ಮಾತಿಗೂ, ಅದರ ಕೆಲಸಗಳಿಗೂ ತಾಳೆಯಾಗುವುದಿಲ್ಲ. ಹಿಂದಿನ ಸರ್ಕಾರವನ್ನು ಬದಿಗೊತ್ತಬೇಕೆಂಬ ಆಶಯದಲ್ಲಿ ರಾಜ್ಯದ ಜನರು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ. ಹಾಗೆಯೇ 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪರ್ಯಾಯವಾಗಿ ಇತರ ಪಕ್ಷಗಳ ಮೇಲೆ ಒಲವು ವ್ಯಕ್ತವಾಗುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ದೇಶದ ವಿವಿಧ ಭಾಗಗಳಲ್ಲೂ ಕಾಂಗ್ರೆಸ್ ಗತ ವೈಭÀವಕ್ಕೆ ಮರಳುತ್ತಿದೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಪಕ್ಷದ ಹಿರಿಯ ನಾಯಕರು ಸಂಘಟನಾತ್ಮಕವಾಗಿ ಕೆಲ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದರ ನಡುವೆ ಬಿಜೆಪಿಗೆ ವಲಸೆ ಹೋಗಿದ್ದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಚರ್ಚೆಯಾಗಿರಬಹುದು, ಯಾರು ಬೇಕು? ಯಾರು ಬೇಡ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದರು.
ಉನ್ನತ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೊಳಗೊಂಡಂತೆ ಸಭೆಯನ್ನು ನಡೆಸಲಾಗಿದೆ. ಒಮ್ಮೆಲೆ ಬದಲಾವಣೆಯನ್ನು ನಿರೀಕ್ಷಿಸುವುದು ಕಷ್ಟ. ಆದರೆ, ಸಕಾರಾತ್ಮಕವಾಗಿ ಬೆಳವಣಿಗೆಯ ವಿಚಾರವಾಗಿ ಉತ್ತಮ ಸಾಧನೆ ತೋರಲಾಗುತ್ತದೆ ಎಂದರು.