ಜಿಲ್ಲೆ

ವಸತಿ ಯೋಜನೆಯಲ್ಲಿ ಸಚಿವರ ರಾಜಕೀಯ: ಚೆನ್ನಿ ಆರೋಪ

ಶಿವಮೊಗ್ಗ: ಗೋವಿಂದಾಪುರದಲ್ಲಿ ಆಶ್ರಯ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲು ವಸತಿ ಸಚಿವ ಜಮೀರ್ ಅಹಮದ್ ಖಾನ್ ಬರಬೇಕಿತ್ತು. ಆದರೆ ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಡ್ಡಗಾಲು ಹಾಕಿದ್ದಾರೆ. ಮಧು ಬಂಗಾರಪ್ಪಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ವಾಗ್ದಾಳಿ ನಡೆಸಿದರು.

ಗೋವಿಂದಾಪುರ ಆಶ್ರಯ ಮನೆ ವಿಷಯಕ್ಕೆ ಸಂಬಂಧಿಸಿ ನಾನು ಮೂರ‌್ನಾಲ್ಕು ಬಾರಿ ವಸತಿ ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಆದರೆ ಶಿವಮೊಗ್ಗಕ್ಕೆ ಬರಬೇಕೆಂದರೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮತಿ ಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದು ಜಿಲ್ಲಾ ಉಸ್ತುವಾರಿ ಸಚಿವರ ರಾಜಕೀಯವಲ್ಲದೆ ಮತ್ತೇನೂ ಅಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಡವರಿಗೆ ಮನೆ ಹಂಚಿಕೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪುರುಸೊತ್ತಿಲ್ಲ ಎಂದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಒಳಿತು. ಬಡವರಿಗೆ ಮನೆ ನೀಡುವುದಕ್ಕೂ ಅಡ್ಡಗಾಲು ಹಾಕುವ ದುರ್ಬುದ್ಧಿ ಏಕೆ? ಇದೆಲ್ಲಾ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

2023ರ ಜುಲೈನಲ್ಲಿ ಯೋಜನೆ ಮಗಿಯಬೇಕಿತ್ತು. 620 ಮನೆಗಳನ್ನು ನೀಡಲಾಗಿದೆ. ಈಗ 625 ಮನೆಗಳಿಗೆ ಅವಕಾಶವಿದೆ. 576 ಮನೆಗಳು ಮುಕ್ತಾಯದ ಹಂತದಲ್ಲಿವೆ. ಫಲಾನುಭವಿಗಳು ಸಾಲ ಮಾಡಿ ತಮ್ಮ ಪಾಲಿನ ವಂತಿಕೆ ಪಾವತಿಸಿದ್ದಾರೆ. ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಈ ಮನೆಗಳಿಗೆ ನೀರೊದಗಿಸಲು 16 ಕೋಟಿ ರೂ. ನೀಡಿದ್ದರು. ಈ ಯೋಜನೆಯಲ್ಲಿ ಮಧು ಬಂಗಾರಪ್ಪ ಕೊಡುಗೆ ಶೂನ್ಯ. ಬಡಜನರು ನಿಮ್ಮಪ್ಪನ ಮನೆಯ ಆಸ್ತಿಯನ್ನೇನೂ ಕೇಳುತ್ತಿಲ್ಲ ಎಂದು ಹರಿಹಾಯ್ದರು.

ಬಿಜೆಪಿ ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿ ದೀನದಯಾಳ್, ಪ್ರಮುಖರಾದ ಮಂಜುನಾಥ್ ನವುಲೆ, ಕೆ.ವಿ. ಅಣ್ಣಪ್ಪ, ಶ್ರೀನಾಗ್ ಸುದ್ದಿಗೋಷ್ಠಿಯಲ್ಲಿದ್ದರು.