ವಿಜಯಪುರ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಆರೋಗ್ಯ ಯೋಜನೆಯ ಕೈಪಿಡಿಯನ್ನು ಶುಕ್ರವಾರ ಸಚಿವ ಎಂ.ಬಿ. ಪಾಟೀಲ ಬಿಡುಗಡೆಗೊಳಿಸಿದರು.
ನಗರದ ಬಿ.ಎಂ. ಪಾಟೀಲ ನಗರದಲ್ಲಿರುವ ಗೃಹ ಕಚೇರಿಯಲ್ಲಿ ಕೈಪಿಡಿ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಸಚಿವರು, ಜಿಲ್ಲೆಯಾದ್ಯಂತ ಅಸಾಂಕ್ರಾಮಿಕ ರೋಗಗಳ ಆರೋಗ್ಯ ತಪಾಸಣೆ ಮತ್ತು ನಿರ್ವಹಣೆಯನ್ನು ಬಲಪಡಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದರು.
ಈ ಕಾರ್ಯಕ್ರಮದಡಿಯಲ್ಲಿ 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 14 ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಡಯಾಬೆಟಿಕ್ ಫೂಟ್ ಮತ್ತು ಡಯಾಬೆಟಿಕ್ ರೆಟಿನೋಪತಿ, ಮಾನಸಿಕ ಆರೋಗ್ಯ ಮತ್ತು ನರ ವೈಜ್ಞಾನಿಕ ಕಾಯಿಲೆಗಳು, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ ಕಾಲಿನ ಮೂತ್ರಪಿಂಡ ಕಾಯಿಲೆ, ದೀರ್ ಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಪಿತ್ತ ಜನಕಾಂಗದ ಕಾಯಿಲೆ ಮತ್ತು ರಕ್ತಹಿನತೆಯ ಕಾಯಿಲೆಗಳ ಕುರಿತು ತಿಳಿವಳಿಕೆ ನೀಡಿ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ನಡೆಸಲಾಗುವುದು ಎಂದರು.
ಡಿಎಚ್ಒ ಡಾ. ಸಂಪತ್ ಗುಣಾರಿ, ಜಿಲ್ಲಾ ಶಸಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಅಪ್ಪಾಸಾಹೇಬ ಇನಾಮದಾರ, ಪರಶುರಾಮ ಹಿಟ್ನಳ್ಳಿ, ಜಾನ್ ಕಟವಟಿ, ಅರ್ಚನಾ ಕುಲಕರ್ಣಿ ಮತ್ತಿತರರಿದ್ದರು.
ವಿಜಯಪುರ ಬಿ.ಎಂ. ಪಾಟೀಲ ನಗರದಲ್ಲಿರುವ ಗೃಹ ಕಚೇರಿಯಲ್ಲಿ ಸಚಿವ ಎಂ.ಬಿ. ಪಾಟೀಲರು ಗೃಹ ಆರೋಗ್ಯ ಯೋಜನೆಯ ಕೈಪಿಡಿ ಬಿಡುಗಡೆಗೊಳಿಸಿದರು. ಡಾ. ಸಂಪತ್ ಗುಣಾರಿ, ಡಾ. ಶಿವಾನಂದ ಮಾಸ್ತಿಹೊಳಿ, ಅಪ್ಪಾಸಾಹೇಬ ಇನಾಮದಾರ ಮತ್ತಿತರರಿದ್ದಾರೆ.