ಚಳ್ಳಕೆರೆ: ಲೋಕಾಯುಕ್ತ ಕಾಯ್ದೆ 1975ರಲ್ಲಿ ಜಾರಿಯಾಗಿದ್ದು, ಸಮಾಜದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ಇಲಾಖೆ ಶ್ರಮಿಸುತ್ತಿದ್ದು, ಮುಖ್ಯವಾಗಿ ಮಾಧ್ಯಮ ಮತ್ತು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಲೋಕಾಯುಕ್ತ ಎಸ್‌ಪಿ ಆರ್.ಎನ್.ವಾಸುದೇವ್ ಹೇಳಿದರು.
ಚಳ್ಳಕೆರೆ ರೋಟರಿ ಬಾಲಭವನದಲ್ಲಿ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ಭಾನುವಾರ ಆಯೋಜಿಸಿದ್ದ ಗಡಿನಾಡು ಪತ್ರಕರ್ತರ ಕಾರ್ಯಾಗಾರ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರಿ ಮತ್ತು ಅನುದಾನ ಪಡೆಯುವ ಸಂಸ್ಥೆಗಳು ಜನಪರ ಕೆಲಸ ಮಾಡಬೇಕು ಎಂದು ತಿಳಿಸಿದ ಅವರು, ಇಲಾಖೆಯಲ್ಲಿ ಜಾತಿ ಮತ್ತು ಅಂತಸ್ತಿನ ತಾರತಮ್ಯ ಇರುವುದಿಲ್ಲ ಎಂದರು.
ಲೋಕಾಯುಕ್ತ ಇಲಾಖೆಯಲ್ಲಿ ದಾಖಲಾದ ಎಷ್ಟೋ ಪ್ರಕರಣಗಳಲ್ಲಿ ಸರ್ಕಾರದ ಭಾಗವಾಗಿರುವ ಸಚಿವರು, ಶಾಸಕರನ್ನು ಬಂಧಿಸಲಾಗಿದೆ. ಆದ್ದರಿಂದ ಇಲಾಖೆ ಕುರಿತು ಜನರು ಹೆಚ್ಚು ನಂಬಿಕೆ ಬೆಳೆಸಿಕೊಂಡು, ಭ್ರಷ್ಟಾಚಾರ ಕಂಡುಬಂದ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ರಾಜ್ಯ ನ್ಯೂಸ್ ಪೇಪರ್ ಅಸೋಷಿಯೇಷನ್ ಅಧ್ಯಕ್ಷ ಬಿ.ವಿ.ವಾಸುದೇವ್ ಮಾತನಾಡಿ, ಗಡಿಭಾಗದಲ್ಲಿ ಸೇವೆ ಮಾಡುವ ಪತ್ರಕರ್ತರಿಗೆ ಭದ್ರತೆ ಬೇಕಿದೆ. ಸ್ಥಳೀಯ ಪೊಲೀಸ್ ಠಾಣೆಗಳು ಗುರುತಿನ ಚೀಟಿ ನೀಡುವ ವ್ಯವಸ್ಥೆ ಆಗಬೇಕು ಎಂದರು.
ಶಾಸಕ ಟಿ.ರಘುಮೂರ್ತಿ, ಒಕ್ಕೂಟದ ಅಧ್ಯಕ್ಷ ಕೆ.ಶಿವಕುಮಾರ್. ಪ್ರಧಾನ ಕಾರ್ಯದರ್ಶಿ ಡಿ.ಈಶ್ವರಪ್ಪ, ಹಿರಿಯ ಪತ್ರಕರ್ತ ಮೋಕ್ಷಗುಂಡಂ, ನಾಗರಾಜ ಕಟ್ಟೆ, ನಗರಸಭಾ ಸದಸ್ಯೆ ಸುಮಾ ಭರಮಣ್ಣ, ಮಹಾಂತೇಶ್‌ರಾವ್ ಸುರ್ವೆ ಇತರರಿದ್ದರು.