ತುಮಕೂರು: ಸತತ ಮಳೆಯಿಂದ ಜಿಲ್ಲೆಯ ವಿವಿಧ ಕೆರೆ-ಕಟ್ಟೆಗಳು, ಅಣೆಕಟ್ಟೆಗಳು ತುಂಬಿರುವ ಹಿನ್ನೆಲೆಯಲ್ಲಿ ಗುರುವಾರ ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯದಲ್ಲಿ ಸತತವಾಗಿ ಮುಂಗಾರು ಮಳೆಯಾಗುತ್ತಿರುವ ಹಾಗೆಯೇ ತುಮಕೂರು ಜಿಲ್ಲೆಯಲ್ಲಿಯೂ ನಿರಂತರವಾಗಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹುಟ್ಟುವ ಶಿಂಷಾ, ಜಯಮಂಗಲಿ, ಗರುಡದ್ವಜ, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ನದಿಗಳು ತುಂಬಿ ಹರಿದ್ದ ಪರಿಣಾಮ ನದಿಪಾತ್ರಗಳ ಕೆರೆ, ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಶಿಂಷಾ ನದಿ ನೀರಿನಿಂದ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿಯ ಮಂಗಳ ಜಲಾಶಯ ತುಂಬಿದ್ದು, ಜಲಾಶಯದಿಂದ ನದಿ ಪಾತ್ರಗಳಿಗೆ ನೀರು ಬಿಡುಗಡೆ ಮಾಡಲಾಗಿದೆ.
ಮಳೆಯಿಂದ ಜನಜೀವನದ ಮೇಲಾಗಿರುವ ದುಷ್ಪರಿಣಾಮಗಳ ಅಧ್ಯಯನದಲ್ಲಿ ಸರ್ಕಾರ ತೊಡಗಿದೆ. ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ, ಹೇಮಾವತಿ ನಾಲಾವಲಯದ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.
ಡ್ಯಾಂ ವೀಕ್ಷಿಸಿ ಸುದ್ದಿಗಾರರ ಜತೆ ಮತನಾಡಿದ ಸಚಿವರು, ಈ ವರ್ಷ ಜು.30ರಿಂದ ಆ.5ರವರೆಗೆ ಕಾವೇರಿ ನೀರಾವರಿ ವಲಯದಲ್ಲಿ ವಾಡಿಕೆಗಿಂದ ಶೇ.12ಕ್ಕೂ ಹೆಚ್ಚು ಮಳೆ ಸುರಿದಿದ್ದರಿಂದ 76 ಕೆರೆಗಳು ಹೊಡೆದು ಹೋಗಿವೆ ಎಂದು ಮಾಹಿತಿ ನೀಡಿದರು.
ನಾಗಮಂಗಲ ಶಾಸಕ ಸುರೇಶಗೌಡ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಹೇಮಾವತಿ ನಾಲಾ ವಲಯ ಮುಖ್ಯ ಇಂಜಿನಿಯರ್ ವರದಯ್ಯ, ಕಾರ್ಯಾಪಾಲಕ ಇಂಜಿನಿಯರ್ ಕೃಷ್ಣಪ್ಪ, ಮೋಹನ್‌ಕುಮಾರ್, ಎಇಇ ಮುರುಳಿ ಮತ್ತಿತರರು ಇದ್ದರು.
ಕೆರೆ, ನಾಲೆ, ಸೇತುವೆ, ರಸ್ತೆಗಳು ಹಾಳಾಗಿರುವ ಬಗ್ಗೆ ನೀರಾವರಿ ನಿಗಮದ ಎಂಡಿ ವರದಿಯಲ್ಲಿ ಸುಮಾರು 90ಕೋಟಿ ರೂ. ನಷ್ಟವಾಗಿದೆ, ತುರ್ತು ದುರಸ್ಥಿ ಕಾಮಗಾರಿಗಳನ್ನು ಆರಂಭಿಸಲು 30ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಶಾಶ್ವತ ಪರಿಹಾರಕ್ಕೆ ಸಂಪೂರ್ಣ ಕ್ರಿಯಾಯೋಜನೆ ರೂಪಿಸುವಂತೆ ಸೂಚಿಸಲಾಗಿದೆ, ನಿಯಮಾನುಸಾರ ಆದ್ಯತೆಯ ಮೇರೆಗೆ ಕಾಮಗಾರಿ ಕೂಡಲೇ ಮಾಡಲು ಕ್ರಮವಹಿಸಲಾಗುವುದು.
| ಗೋವಿಂದ ಎಂ.ಕಾರಜೋಳ ಜಲಸಂಪನ್ಮೂಲ ಸಚಿವ