ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಚುನಾವಣೆ ಬಳಿಕ ರೈತರ ಪರವಾದ ತೀರ್ಮಾನ ತೆಗೆದುಕೊಳ್ಳೋಣ, ರೈತರನ್ನು ಬಿಟ್ಟು ಯಾವುದೇ ತೀರ್ಮಾನ ಮಾಡುವುದಿಲ್ಲ. ಮತದಾನ ಸಂವಿಧಾನಾತ್ಮಕ ಹಕ್ಕು. ಈ ಬಗ್ಗೆ ಯೋಚಿಸಿ, ಅಧಿಕಾರವನ್ನು ಚಲಾಯಿಸಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಮನವಿ ಮಾಡಿದರು.
ಕೆಐಎಡಿಬಿಗೆ ಭೂಸ್ವಾಧೀನ ವಿರೋಧಿಸಿ ಹೋಬಳಿ ಕೇಂದ್ರದಲ್ಲಿ ರೈತರು ಹಮ್ಮಿಕೊಂಡಿರುವ ಧರಣಿ ಸ್ಥಳಕ್ಕೆ ಆಗಮಿಸಿದ ಸಚಿವರು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿರುವ ರೈತರ ಜತೆ ಸಮಾಲೋಚಿಸಿ ಮಾತನಾಡಿದರು.
ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ನಾನು ಮಾತನಾಡುವುದು ಸರಿಯಲ್ಲ ಎಂದಾಗ, ಆಕ್ರೋಶಗೊಂಡ ರೈತರು, ಈ ಹಿಂದೆ ನಿಮ್ಮನ್ನು ಭೇಟಿ ಮಾಡಿದಾಗ ನೀತಿ ಸಂಹಿತೆಗೂ ಇದಕ್ಕೂ ಸಂಬಂಧವಿಲ್ಲ, ಈ ವಿಷಯವನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದೀರಿ. ಈಗ ಚುನಾವಣೆ ಅಡ್ಡ ತರುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಕೃಷಿ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು.
ರೈತರ ಒತ್ತಡಕ್ಕೆ ಉತ್ತರಿಸಿದ ಸಚಿವರು, ನಾನು ರೈತರ ಪರವಾಗಿ ನಿಲ್ಲುತ್ತೇನೆ. ಚುನಾವಣೆ ನಂತರ ಆದಷ್ಟೂ ಶೀಘ್ರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಬಹುದಷ್ಟೆ ಎಂದರು ಮತದಾನ ಬಹಿಷ್ಕಾರ ಕೈಬಿಡುವಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಧರಣಿ ಸ್ಥಳಕ್ಕೆ ಆಗಮಿಸಿ, ಮನವಿ ಮಾಡಿದರು.
ಈ ವೇಳೆ ಧರಣಿನಿರತ ರೈತರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿ ಶಿವಶಂಕರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ರೈತರ ಸಮಸ್ಯೆ ಆಲಿಸಿ, ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆಗಾಗಿ ಸಭೆ ಆಯೋಜಿಸಲು ನಾವು ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಹೀಗಾಗಿ ಮತದಾನ ಬಹಿಷ್ಕಾರದ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು. ಆದರೆ, ರೈತರು ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ. ನಾವು ಮತ ಚಲಾಯಿಸಿ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ಮೊದಲು ಮತದಾನದ ಹಕ್ಕನ್ನು ಚಲಾಯಿಸಿ. ನಿಮ್ಮ ಸಮಸ್ಯೆ ಸರ್ಕಾರದ ಹಂತದಲ್ಲಿ ಬಗೆಹರಿಯುವಂಥದ್ದು. ಅಧಿಕಾರಿಗಳು ತೀರ್ಮಾನ ಕೈಗೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದರು.