ಮಂಗಳೂರು : ಕಡಲಿನಲ್ಲಿ ಮೀನುಗಾರರ ಸುರಕ್ಷತಾ ಕ್ರಮ ಮತ್ತು ನಿಯಮಾವಳಿಗಳನ್ನು ಬಲಪಡಿಸುವ ಬಗ್ಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಂಗಳೂರಿನ ಕೋಸ್ಟ್‌ಗಾರ್ಡ್ ಕಚೇರಿಯಲ್ಲಿ ಸಭೆ ನಡೆಯಿತು.
ಮೀನುಗಾರ ಸಮುದಾಯದ ಹಿತರಕ್ಷಣೆಗೆ ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿದೆ. ಮೀನುಗಾರರು ತಮ್ಮ ಜೀವವನ್ನು ಪಣಕ್ಕಿಟ್ಟು ಮೀನುಗಾರಿಕೆಗೆ ತೆರಳುತ್ತಾರೆ. ಇವರ ಸುರಕ್ಷತೆ ಇಲಾಖೆಯ ಆದ್ಯತೆಯಾಗಿದೆ. ಸಮುದ್ರದಲ್ಲಿ ಸುರಕ್ಷತೆ ಹೆಚ್ಚಿಸಲು ಮತ್ತು
ಅಪಾಯಗಳನ್ನು ತಗ್ಗಿಸಲು ಕಟಿಬದ್ಧರಾಗಿರಬೇಕು ಎಂದು ಸಚಿವರು ಈ ಸಂದರ್ಭ ತಿಳಿಸಿದರು.
ಮೀನುಗಾರಿಕೆಗೆ ತೆರಳುವ ನಾಡದೋಣಿ, ಬೋಟುಗಳಲ್ಲಿ ಸುರಕ್ಷತಾ ಪರಿಕರಗಳಿಗೆ ಮೀನುಗಾರರು ಆದ್ಯತೆ ನೀಡಬೇಕು. ಸಮುದ್ರದ ಉಬ್ಬರ, ನದಿಗಳಲ್ಲಿ ನೀರಿನ ಹರಿವು ಹೆಚ್ಚಳದ ಸಂದರ್ಭದಲ್ಲಿ ಮೀನುಗಾರರಿಗೆ ಮುನ್ಸೂಚನೆ ನೀಡಬೇಕು. ಮೀನುಗಾರರು ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ ಸಂದರ್ಭದಲ್ಲಿ ತಕ್ಷಣವೇ ಅವರಿಗೆ ನೆರವು ದೊರಕಿಸಲು ವ್ಯವಸ್ಥೆಗಳಾಗಬೇಕು ಎಂದು ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.
ಕೋಸ್ಟ್‌ಗಾರ್ಡ್, ಮೀನುಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು, ವಿವಿಧ ಮೀನುಗಾರರ ಸಂಘಟನೆಗಳ ಪ್ರದಾಧಿಕಾರಿಗಳು
ಸಭೆಯಲ್ಲಿ ಭಾಗವಹಿಸಿದ್ದರು.