ಜಿಲ್ಲೆ

ಪ್ರಧಾನಿ ಮೋದಿ ಆಡಳಿತದಲ್ಲಿ ಅಭಿವೃದ್ಧಿಯ ಪರ್ವ

ರೈಲ್ವೆ ಸಚಿವ ವಿ.ಸೋಮಣ್ಣ ಬಣ್ಣನೆ

ಇಂದ್ರಾಳಿಯಲ್ಲಿ ಮೇಲ್ಸೇತುವೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಅಭಿವೃದ್ಧಿಯ ಪರ್ವವೇ ನಡೆದಿದೆ. ಯುಪಿಎ ಸರ್ಕಾರ 50 ವರ್ಷದಲ್ಲಿ ಮಾಡದ ಕಾರ್ಯವನ್ನು ಕೇವಲ 10 ವರ್ಷದಲ್ಲಿ ಮೋದಿ ಸಾಧಿಸಿದ್ದಾರೆ. 50 ವರ್ಷದ ಹಿಂದೆಯೇ ಮೋದಿ ಪ್ರಧಾನಿಯಾಗಿದ್ದರೆ ಅಮೆರಿಕವನ್ನೇ ಮೆಟ್ಟಿ ನಿಲ್ಲುವಂತಹ ವಿಶ್ವದ ಅಗ್ರಗಣ್ಯ ದೇಶ ಭಾರತ ಆಗಿರುತ್ತಿತ್ತು. ಈಗಲೂ ಸಹ ಆ ಕಾರ್ಯ ಮುನ್ನಡೆದಿದೆ. ಕೆಲವೇ ವರ್ಷಗಳಲ್ಲಿ ಭಾರತವು ವಿಶ್ವಗುರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು.

ಉಡುಪಿಯ ಇಂದ್ರಾಳಿಯಲ್ಲಿ ಕೇಂದ್ರೀಯ ಭೂ ಸಾರಿಗೆ ಮಂತ್ರಾಲಯ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ರೈಲ್ವೆ ಮೇಲ್ಸೇತುವೆಯನ್ನು ಸೆಪ್ಟೆಂಬರ್​ 21ರಂದು ಬೆಳಗ್ಗೆ ಉದ್ಘಾಟಿಸಿ ಮಾತನಾಡಿದರು.

ಸ್ವದೇಶಿ ವಸ್ತು ಖರೀದಿಸಿ

ದೇಶವಾಸಿಗರಿಗೆ ಅಗತ್ಯವಿರುವ ಸಣ್ಣ ಸಣ್ಣ ಸೌಲಭ್ಯ ಒದಗಿಸುವುದೇ ಪ್ರಧಾನಿ ಮೋದಿ ಆಶಯ. ದೇಶದ ಯಾವುದೇ ರಾಜ್ಯಕ್ಕೆ ಹೋದರೂ ಮೂಲ ಸೌಕರ್ಯಗಳು ಕಂಡುಬರುತ್ತಿವೆ. ಅದಕ್ಕೆ ಇಂದ್ರಾಳಿಯ ಈ ಸಣ್ಣ ಸೇತುವೆಯೂ ಸಹ ಸಾಕ್ಷ್ಯವಾಗಿದೆ. ಭಾರತವನ್ನು ಆರ್ಥಿಕವಾಗಿ ಪ್ರಬಲ ದೇಶವನ್ನಾಗಿಸಲು ಭಾರತೀಯರೆಲ್ಲರೂ ಸ್ವದೇಶಿ ವಸ್ತುಗಳನ್ನೇ ಖರೀದಿಸಬೇಕು. ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಜಿಎಸ್​ಟಿಯನ್ನೂ ಇಳಿಸಲಾಗಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.

ಕಾಮಗಾರಿಯಲ್ಲಿ ಎದುರಾಗಿತ್ತು ಅನೇಕ ಸವಾಲು

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮೇಲ್ಸೇತುವೆ ನಿರ್ಮಾಣದಲ್ಲಿ ಅನೇಕ ಸವಾಲು, ಸಮಸ್ಯೆ ಎದುರಾಗಿದ್ದು ಸತ್ಯ. ಗುತ್ತಿಗೆದಾರರ ವಿರುದ್ಧ ಜಿಲ್ಲಾಧಿಕಾರಿ ಕೇಸ್​ ದಾಖಲಿಸಿ ಕಾಮಗಾರಿ ಮುನ್ನಡೆಸುವಂತಹ ಪರಿಸ್ಥಿತಿಯೂ ಬಂದಿತ್ತು. ಗರ್ಡರ್​ ಬ್ರಿಡ್ಜ್​ ಜೋಡಣೆಗೆ ಗ್ರಿಬ್ಸ್​ ಇರಲಿಲ್ಲ. ಅದನ್ನು ರೇಲ್ವೆ ಇಲಾಖೆಯಿಂದ ತರಿಸಿಕೊಂಡು ಕಾಮಗಾರಿ ಮುಗಿಸಿದ್ದೇವೆ. ಇದರ ನಡುವೆ ಅನೇಕ ಟೀಕೆ-ಟಿಪ್ಪಣೆಯೂ ಬಂದಿದ್ದು, ಅವೆಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿದ್ದೇನೆ. ಎಲ್ಲರ ಉದ್ದೇಶವೂ ಸಹ ಕುಂಟುತ್ತ ಸಾಗುತ್ತಿರುವ ಬ್ರಿಡ್ಜ್​ ಬೇಗ ಉದ್ಘಾಟನೆಯಾಗಲಿ ಎನ್ನುವುದೇ ಆಗಿತ್ತು ಎಂದರು.

ಮಾಜಿ ಸಚಿವ ಪ್ರಮೋದ ಮಧ್ವರಾಜ್​, ಶಾಸಕರಾದ ಸುನೀಲಕುಮಾರ್​, ಕಿರಣಕುಮಾರ ಕೊಡ್ಗಿ, ಗುರ್ಮೆ ಸುರೇಶ ಶೆಟ್ಟಿ, ಗುರುರಾಜ ಗಂಟಿಹೊಳೆ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್​, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಆಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​, ದಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಕುಂಪಿಲ, ಮಾಜಿ ಶಾಸಕ ಲಾಲಾಜಿ ಆರ್​. ಮೆಂಡನ್​, ರಾ.ಹೆ. ಇಲಾಖೆಯ ಅಧಿಕಾರಿಗಳಾದ ಎಂ.ಕಿರಣ, ಲೋಕೇಶ ಉಪಸ್ಥಿತರಿದ್ದರು.

ಸುಜಲಾ ಎಸ್​. ಸುವರ್ಣ ಒಂದೇ ಮಾತರಂ ಗೀತೆ ಹಾಡಿದರು. ನಗರಸಭಾ ಸದಸ್ಯ ಗಿರೀಶ ಅಂಚನ್​ ಸ್ವಾಗತಿಸಿದರು. ಇಂದ್ರಾಳಿ ವಾರ್ಡ್​ ಸದಸ್ಯ ಅಶೋಕ ನಾಯ್ಕ ವಂದಿಸಿದರು. ಸತೀಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಆರತಿ ಬೆಳಗಿ, ತಿಲಕವಿಟ್ಟ ಮಹಿಳೆಯರು

ಇಂದ್ರಾಳಿ ಬ್ರಿಡ್ಜ್​ ಉದ್ಘಾಟನೆಗೆ ಆಗಮಿಸಿದ ಸಚಿವ ವಿ.ಸೋಮಣ್ಣ ಅವರಿಗೆ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ವೇದಿಕೆ ಬಳಿ ಬರುತ್ತಿದ್ದಂತೆ ಮಹಿಳೆಯರು ಹಾಗೂ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಸದಸ್ಯೆಯರು ಆರತಿ ಬೆಳಗಿದರು. ಹಣೆಗೆ ತಿಲಕವಿಟ್ಟು ಗೌರವಿಸಿದರು. ಇದನ್ನು ನಿರೀಕ್ಷಿಸಿರದ ಸಚಿವ ಸೋಮಣ್ಣ ಭಾವುಕರಾಗಿ ಕೈಮುಗಿದು ನಿಂತಿದ್ದರು.
ಆರ್ಥಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲಿಯೇ ಉಡುಪಿ ಜಿಲ್ಲೆ ಗಮನ ಸೆಳೆಯುತ್ತದೆ. ಅಭಿವೃದ್ಧಿಯಲ್ಲೂ ಸಹ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಇಂದಿನ ಸಂದರ್ಭದಲ್ಲಿ ದಿ. ವಿ.ಎಸ್​. ಆಚಾರ್ಯ ಅವರನ್ನು ನೆನೆಪಿಸಿಕೊಳ್ಳಬೇಕಿದೆ. ಊಹಿಸಲೂ ಸಾಧ್ಯವಿಲ್ಲದಂತೆ ಇದ್ದ ಉಡುಪಿ- ಮಣಿಪಾಲ ರಸ್ತೆ ಮಾರ್ಗ ಇಂದು ಕಂಗೊಳಿಸುತ್ತಿರುವಲ್ಲಿ ಅವರ ಕೊಡುಗೆ ಅಪಾರವಿದೆ. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.