ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ಹಿನ್ನೆಲೆಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವುದು.  
ಜಿಲ್ಲೆ

ಅರಸೀಕೆರೆಗೆ ಇಂದು ಸಚಿವ ಸೋಮಣ್ಣ ಭೇಟಿ

ಅರಸೀಕೆರೆ: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶನಿವಾರ ನಗರಕ್ಕೆ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಲಿದ್ದಾರೆ.

ಅಮೃತ ಯೋಜನೆಯಡಿ ಬಹುಕೋಟಿ ವೆಚ್ಚದಲ್ಲಿ ದಶಕಗಳ ಬಳಿಕ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದ್ದು ಶೆಲ್ಟರ್, ಪಾರ್ಕಿಂಗ್, ಟಿಕೆಟ್ ಬುಕಿಂಗ್, ಹೋಟೆಲ್ ಸೇರಿದಂತೆ ಹಲವು ಸವಲತ್ತುಗಳನ್ನೊಳಗೊಂಡ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಸಚಿವರ ಭೇಟಿ ನಿಗದಿಯಾದ ಸುದ್ದಿ ತಿಳಿಯುತ್ತಲೇ ಎಚ್ಚೆತ್ತಿರುವ ಗುತ್ತಿಗೆದಾರ ಹಾಗೂ ಅಧಿಕಾರಿಗಳು ತರಾತುರಿಯಲ್ಲಿ ಕೆಲಸ ಮಾಡುತ್ತಿರುವ ದೃಶ್ಯ ಶುಕ್ರವಾರ ಕಂಡುಬಂದಿತು. ವಾಸನೆ ಬಾರದಂತೆ ಅಲ್ಲಲ್ಲಿ ಬ್ಲೀಚಿಂಗ್ ಪೌಡರ್ ಹಾಕಿದ್ದರೆ, ಮತ್ತೆ ಕೆಲವೆಡೆ ಸಿಮೆಂಟ್ ಇಟ್ಟಿಗೆ ಅಳವಡಿಸುವ ಕೆಲಸ ಭರದಿಂದ ಸಾಗಿದೆ. ನಿಲ್ದಾಣದ ಆಯಕಟ್ಟಿನ ಜಾಗಗಳಲ್ಲಿ ಸಚಿವರನ್ನು ಸ್ವಾಗತಿಸುವ ಕಟೌಟ್‌ಗಳು ದಿಢೀರ್ ಪ್ರತ್ಯಕ್ಷವಾಗಿವೆ.

ವಿಜಯವಾಣಿ ವರದಿ ಪರಿಣಾಮ: ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ, ಹೈದ್ರಾಬಾದ್, ತಿರುಚನಾಪಳ್ಳಿ-ಶಿವಗಂಗಾ, ಬೆಂಗಳೂರು ಇಂಟರ್‌ಸಿಟಿ, ದಾದರ್ ಎಕ್ಸ್‌ಪ್ರೆಸ್, ಜನಶತಾಬ್ದಿ, ಸಂಪರ್ಕ ಕ್ರಾಂತಿ, ಮಿನಿಮಹಾಲಕ್ಷ್ಮೀ, ರಾಣಿ ಚನ್ನಮ್ಮ, ಧಾರವಾಡ-ಮೈಸೂರು, ಶಿವಮೊಗ್ಗ-ಮೈಸೂರು-ಬೆಂಗಳೂರು, ಜೋಧ್‌ಪುರ್, ರಾಣಿಗುಂಟಾ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ, ಮುಂಬೈ, ವಾಸ್ಕೋ, ವಿಜಯಪುರ, ಮೈಸೂರು ಸೇರಿದಂತೆ ವಾರದಲ್ಲಿ 80ಕ್ಕೂ ಹೆಚ್ಚಿನ ರೈಲುಗಳಲ್ಲಿ ಬಂದಿಳಿಯುವ ಪ್ರಯಾಣಿಕರು ಬಿಸಿಲಿನ ಝಳ, ಇಲ್ಲವೇ ಮಳೆಯ ಹೊಡೆತಕ್ಕೆ ಸಿಲುಕಿ ಪರದಾಡುವ ಸನ್ನಿವೇಶ ನಿರ್ಮಾಣಗೊಂಡಿದೆ. ಭಾರಿ ಮಳೆ ಸುರಿದಲ್ಲಿ ಹಿಂದೆ ಅಳವಡಿಕೆ ಮಾಡಿರುವ ಶೀಟ್‌ಗಳು ತೊಟ್ಟಿಕ್ಕುತ್ತಿದ್ದು ನಿಲ್ಲಲು ಸಾಧ್ಯವಿಲ್ಲದಂತಾಗಿದೆ. ಜತೆಗೆ ಎರಡೂ ಬದಿಯ ಪ್ಲಾಟ್‌ಫಾರ್ಮ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಯಾಣಿಕರನ್ನು ಕಾಡುತ್ತಿದೆ. ಆಯಕಟ್ಟಿನ ಜಾಗಗಳಲ್ಲಿ ನೀರು ಪೂರೈಕೆ ಘಟಕಗಳಿದ್ದರೂ ಪ್ರಯೋಜನಕ್ಕೆ ಬಾರದಂತಾಗಿವೆ. ಕಣ್ಗಾವಲು ಕ್ಯಾಮರಾಗಳ ಕೊರತೆ ನಿಲ್ದಾಣಕ್ಕಿದೆ. ಸರಗಳವು, ಅತಿಕ್ರಮ ಪ್ರವೇಶ, ಬೈಕ್ ಕಳ್ಳತನದಂತಹ ಕೃತ್ಯ ಪತ್ತೆಹಚ್ಚಲು ಸಾಧ್ಯವಿಲ್ಲದಂತಾಗಿತ್ತು. ನಿಲ್ದಾಣದ ಅವ್ಯವಸ್ಥೆ ಕುರಿತು ಮೇ 12ರಂದು ವಿಜಯವಾಣಿ ಪತ್ರಿಕೆಯಲ್ಲಿ ಆಮೆವೇಗದಲ್ಲಿ ಮೇಲ್ದರ್ಜೆ ಕಾಮಗಾರಿ ಶೀರ್ಷಿಕೆ ಅಡಿಯಲ್ಲಿ ಸಮಗ್ರ ವರದಿ ಪ್ರಕಟಿಸಿದ್ದು ಫಲ ನೀಡಿದೆ. ಇದೀಗ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಪರಿಶೀಲನೆ ನಡೆಸಲಿದ್ದು, ಅಭಿವೃದ್ಧಿ ಕಾಮಗಾರಿ ಮತ್ತಷ್ಟು ವೇಗ ಪಡೆದುಕೊಳ್ಳುವ ನಿರೀಕ್ಷೆ ಹೆಚ್ಚಿದೆ.