ಇಂಡಿ: ರೈತರ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ನಿಗದಿ ಮಾಡುವ ಪ್ರಧಾನಮಂತ್ರಿ ಇದುವರೆಗೂ ನಮಗೆ ಸಿಗದೇ ಇರುವುದು ರೈತರ ದುರಾದಷ್ಠವೇ ಸರಿ. ಉತ್ಪಾದನಾ ಕಂಪನಿಗಳಿಗೆ ದರ ನಿಗದಿ ಮಾಡಲಾಗುತ್ತದೆ, ಆದರೆ ರೈತರು ಉತ್ಪಾದಿಸುವ ಬೆಳೆಗಳಿಗೆ ತಕ್ಕ ಬೆಲೆ ಸಿಗುತ್ತಿಲ್ಲ ಎಂದು ಸಕ್ಕರೆ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಹಾಗೂ ವಿಜಯಪುರ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಲಚ್ಯಾಣ ಗ್ರಾಮದ ಕಮರಿ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಿ.ಸಿ.ಸಿ ಬ್ಯಾಂಕ್‌ನ 49ನೇ ಶಾಖೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ 5 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಆಗ ಸಹಕಾರ ಚಳವಳಿ ನಡೆಸದಿದ್ದರೆ ಈಗ ಇಂತಹ ಯೋಜನೆಗಳು ರೈತರಿಗೆ ಸಿಗುತ್ತಿರಲಿಲ್ಲ ಎಂದು ಸಹಕಾರ ಚಳವಳಿ ಮಾಡಿದ ಹಿರಿಯರನ್ನು ಸ್ಮರಿಸಿದರು. ಭಾರತದಲ್ಲಿ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದ್ದು ವಿಜಯಪುರ-ಬಾಗಲಕೋಟೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು.
ರಾಜ್ಯದಲ್ಲಿ 27 ಸಕ್ಕರೆ ಕಾರ್ಖಾನೆಗಳಿಗೆ ಬಿಡಿಸಿಸಿ ಬ್ಯಾಂಕ್ ಸಾಲ ನೀಡಿದೆ. 272 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿದ್ದು, 234 ಸ್ವಂತ ಕಟ್ಟಡ ಕಟ್ಟಿಸಲಾಗಿದೆ. ಬಿಡಿಸಿಸಿ ಬ್ಯಾಂಕ್ 6 ಸಾವಿರ ಕೋಟಿ ರೂ. ವಹಿವಾಟು ಹೊಂದಿದೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ ಶಾಖೆ ಉದ್ಘಾಟಿಸಿ ಮಾತನಾಡಿ, ಸಹಕಾರ ರಂಗ ಗಟ್ಟಿಯಾಗಿದ್ದರೆ ದೇಶ ಬಲಿಷ್ಠವಾಗಿರುತ್ತದೆ. ನಮ್ಮ ಕರ್ನಾಟಕ ಇದರಿಂದ ಬಲಿಷ್ಠವಾಗಿದೆ. ಭಾರತದ ಪ್ರಗತಿಯಲ್ಲಿ ಸಹಕಾರ ಬ್ಯಾಂಕ್‌ಗಳ ಕೊಡುಗೆ ಅಪಾರವಾಗಿದೆ ಎಂದರು.
ಕಾತ್ರಾಳ-ಬಾಲಗಾಂವದ ಅಮೃತಾನಂದ ಶ್ರೀಗಳು ಮಾತನಾಡಿ, ಸಹಕಾರಿ ಬ್ಯಾಂಕ್ ಯಶಸ್ವಿಯಾಗಲು ಠೇವಣಿದಾರರ ಜೊತೆಗೆ ಸಕಾಲದಲ್ಲಿ ಸಾಲ ಮರು ಪಾವತಿ ಮಾಡುವ ಸಾಲಗಾರರು ಮುಖ್ಯವಾಗಿದ್ದು ಅವರಿಗೆ ಗೌರವ ಸಲ್ಲಬೇಕಾಗಿದೆ ಎಂದರು.
ಬ್ಯಾಂಕ್‌ನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ಸಿಇಒ ಎಸ್.ಡಿ. ಬಿರಾದಾರ, ಆರ್.ಎಂ. ಬಣಕಾರ, ಎಂ.ಎಸ್. ಹತ್ತೂರಕರ ಮಾತನಾಡಿದರು. ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ಶಂಕ್ರಪ್ಪ ಸಿದ್ರಾಮಶೆಟ್ಟಿ, ಗ್ರಾ.ಪಂ ಅಧ್ಯಕ್ಷೆ ಕಲಾವತಿ ಬಿರಾದಾರ, ವೆಂಕಟೇಶ ಕುಲಕರ್ಣಿ, ಸಿದ್ದಣ್ಣ ಬೂದಿಹಾಳ, ಆರ್.ಎಂ. ಬಣಗಾರ, ಎಸ್.ಡಿ. ಪಾಟೀಲ, ಎಂ.ಸಿ. ಬಿರಾದಾರ, ಎಂ.ಎಸ್. ದೇಸಾಯಿ, ಐ.ಎನ್. ತೆಲ್ಲೂರ, ಎಂ.ಬಿ. ವಾಡೇದ, ವೈ.ಎಂ. ಕಲಾವಂತ, ಜಗದೇವಿ ತಾಂಬೆ, ಎನ್.ಜಿ. ಜನಿವಾರ, ಐ.ಎನ್. ಸಂಖ, ಪುಷ್ಪಾವತಿ ಮರೋಬ, ಸಹಕಾರಿ ಸಂದ ಜಿಲ್ಲಾ ಉಪನಿಬಂಧಕಿ ಎಸ್.ಕೆ.ಭಾಗ್ಯಶ್ರೀ, ಕೆ.ಎಚ್. ವಡ್ಡರ, ಎಂ.ಆರ್. ಪಾಟೀಲ, ಶ್ರೀಮಂತ ಇಂಡಿ, ಗಣೇಶಲಿಂಗ ಮಹಾರಾಜರು ಮತ್ತಿತರರಿದ್ದರು.