ಜಿಲ್ಲೆ

ಏ.30ರಂದು ಸರ್ವಧರ್ಮದ ಸಂಸತ್ತು ನಡೆಸಲು ಚಿಂತನೆ

ಕನಕಗಿರಿ: ಸಾಂಸ್ಕೃತಿಕ ನಾಯಕ ಬಸವೇಶ್ವರ ಐಕ್ಯಸ್ಥಳ ಕೂಡಲಸಂಗಮದಲ್ಲಿ ಏ.30ರಂದು ಸರ್ವಧರ್ಮದ ಸಂಸತ್ತು ನಡೆಸಲು ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಘೋಷಣೆ ಮಾಡಿ ಅವರಿಗೆ ಗೌರವ ಸಲ್ಲಿಸಿದೆ. ಅದರಂತೆ ಅನುಭವ ಮಂಟಪದ ಮಾದರಿಯಲ್ಲಿ ಹಿಂದು, ಮುಸ್ಲಿಂ, ಬೌದ್ಧ, ಜೈನ್ ಸೇರಿ ಇತರ ಧರ್ಮಗಳನ್ನೊಳಗೊಂಡ ಸರ್ವಧರ್ಮ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಏ.27ರಂದು ಬಾಗಲಕೋಟೆಯಲ್ಲಿ ಸಭೆ ಕರೆಯಲಾಗಿದೆ ಎಂದರು.

ಸ್ಥಗಿತಗೊಂಡಿರುವ ಚಾಲುಕ್ಯ ಉತ್ಸವವನ್ನು ಕೋನಾರ್ಕ್ ಉತ್ಸವದ ಮಾದರಿಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರನ್ನು ಕರೆಯಿಸಿ ನವೆಂಬರ್‌ನಲ್ಲಿ ನಡೆಸುವ ಉದ್ದೇಶವಿದೆ. ಕೋನಾರ್ಕ್‌ನಲ್ಲಿ 5 ದಿನಗಳ ಕಾಲ ಉತ್ಸವ ಆಚರಿಸಲಾಗುತ್ತದೆ. ಅದರಂತೆ ಪುನಹ ಆರಂಭಗೊಳ್ಳಲಿರುವ ಚಾಲುಕ್ಯ ಉತ್ಸವ ಎಷ್ಟು ದಿನಗಳ ಕಾಲ ಆಚರಿಸಬೇಕು ಎನ್ನುವುದನ್ನು ಸ್ಥಳೀಯರೊಂದಿಗೆ ಚರ್ಚಿಸಲಾಗುವುದು. ಏಪ್ರಿಲ್ 2ನೇ ವಾರದಲ್ಲಿ ಆನೆಗೊಂದಿ ಉತ್ಸವ ಆಚರಿಸಲಾಗುವುದು. ಹಿಂದಿನ ಉತ್ಸವದ ಅನುದಾನವನ್ನು ಮಂಜೂರು ಮಾಡಲಾಗುವುದು. ಬೇರೆ ಬೇರೆ ಕಡೆಗಳಿಂದಲೂ ಉತ್ಸವಗಳನ್ನು ಆಚರಿಸುವಂತೆ ಬೇಡಿಕೆಗಳಿವೆ ಎಂದರು.

ಕನಕಗಿರಿ ಉತ್ಸವದ ಬಗ್ಗೆ ಸ್ಥಳೀಯ ನಾಯಕರೊಂದಿಗೆ ಚರ್ಚಿಸಲಾಗುವುದು. ಸಾಧಕ ಬಾಧಕಗಳನ್ನು ತಿಳಿದುಕೊಂಡು ಉತ್ಸವ ಆಚರಣೆಗೆ ಕ್ರಮವಹಿಸಲಾಗುವುದು ಎಂದರು.