ಕಾರಟಗಿ : ತಾಲೂಕಿನ ಸಿದ್ದಾಪುರದಲ್ಲಿ ನಡೆಯಲಿರುವ ತಾಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ಸಿದ್ದಾಪುರದ ಎಪಿಎಂಸಿ ಆವರಣದಲ್ಲಿ ಭಾನುವಾರ ಕಸಾಪದಿಂದ ಹಮ್ಮಿಕೊಂಡಿದ್ದ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.
ಸಮ್ಮೇಳನಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಸಿದ್ದಾಪುರದಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಸ್ಥಳೀಯರ ಸಹಕಾರ ಅಗತ್ಯ. ಕನ್ನಡ ಮನಸ್ಸುಗಳು ಒಂದಾಗಲಿ. ಇದು ಕೇವಲ ಒಬ್ಬರು, ಇಬ್ಬರಿಂದ ನಡೆಯುವುದಿಲ್ಲ. ಸರ್ವರ ಸಹಕಾರ ಅಗತ್ಯವಾಗಿದೆ. ಪ್ರತಿಯೊಬ್ಬರೂ ಈ ಕನ್ನಡ ಹಬ್ಬದಲ್ಲಿ ಭಾಗವಹಿಸಬೇಕು. ಸಡಗರ ಹಾಗೂ ಸಂಭ್ರಮದಿಂದ ನಾವೆಲ್ಲರೂ ಆಚರಿಸಬೇಕು ಎಂದರು.
ಇದಕ್ಕೂ ಮುನ್ನ ಎಪಿಎಂಸಿ ಆವರಣದಲ್ಲಿ ಸಾಹಿತ್ಯ ಹಾಗೂ ಶಿಕ್ಷಣ ಪ್ರೇಮಿಗಳು, ಮುಖಂಡರು, ಗ್ರಾಮಸ್ಥರು ಸಮ್ಮೇಳನ ಯಶಸ್ವಿಗೊಳಿಸುವ ಸಂಬಂಧ ಚರ್ಚೆ ನಡೆಸಿದರು. ಮುಖಂಡರಾದ ಎಂ.ಡಿ. ಸಿರಾಜ್, ರವಿಚಂದ್ರ ಹೊಸಮನಿ, ನಾಗೇಶ್ ಸಿಂಧನೂರು, ಚಂದ್ರಶೇಖರ್ ಗೌಡ ಪೊ.ಪಾ, ಖಾದರ್ ಸಾಬ್ ಬಂಡ್ರಾಳ್, ಮಹಮ್ಮದ್, ಕನಕಪ್ಪ, ಚನ್ನಬಸಪ್ಪ ವಕ್ಕಳದ್, ಚಂದ್ರಶೇಖರ್ ಗಣವಾರಿ ಸೇರಿ ಇತರರಿದ್ದರು.