ಜಿಲ್ಲೆ

ನೆರೆ ಹಾವಳಿ ಪ್ರದೇಶಕ್ಕೆ ಸಚಿವ ಶಿವರಾಜ್​ ತಂಗಡಗಿ ಭೇಟಿ

ಕೊಪ್ಪಳ: ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್​ ತಂಗಡಗಿ ಹೇಳಿದರು.

ಕಾರಟಗಿನ ತಾಲೂಕಿನ ನದಿ ಪಾತ್ರದ ಉಳೇನೂರು, ಬೆನ್ನೂರು, ಜಮಾಪುರ ಗ್ರಾಮಗಳಿಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ, ನೆರೆ ಹಾವಳಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಸುಮಾರು 1.85 ಲಕ್ಷ ಕ್ಯೂಸೆಕ್​ ಒಳ ಹರಿವು ಇದೆ. 1.70 ಲಕ್ಷ ಕ್ಯೂಸೆಕ್ಸ್​ ನೀರನ್ನು ನದಿಗೆ ಹರಿಸಲಾಗುತ್ತಿದೆ. ತಹಸೀಲ್ದಾರ್​ ಹಾಗೂ ಪೊಲೀಸ್​ ಅಧಿಕಾರಿಗಳಿಗೆ ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇಂದು ತಹಸೀಲ್ದಾರ್​ ಗಳ ಜತೆ ಸಭೆ: ರೈತರ ಜಮೀನುಗಳಿಗೆ ನೀರು ತುಂಬಿರುವ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಹಾನಿ ಪ್ರಮಾಣದ ಬಗ್ಗೆ ತಹಸೀಲ್ದಾರ್​ ಅವರಿಂದ ಮಾಹಿತಿ ಪಡೆದು ಪರಿಹಾರ ಒದಗಿಸಲಾಗುವುದು. ಅಲ್ಲದೆ, ಮುಂಜಾಗೃತ ಕ್ರಮವಾಗಿ ಕೈಗೊಳ್ಳಬಹುದಾದ ಕ್ರಮಗಳ ಚರ್ಚೆ ನಡೆಸಲು ಶನಿವಾರ ಕೊಪ್ಪಳ ಜಿಲ್ಲೆಯ ಎಲ್ಲಾ ತಹಸೀಲ್ದಾರ್​ ಹಾಗೂ ಇಓಗಳ ಸಭೆ ಕರೆಯಲಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಸಭೆ ನಡೆಯಲಿದೆ ಎಂದು ವಿವರಿಸಿದರು.

ಪಿತೂರಿಗೆ ಬಗ್ಗಲ್ಲ
ಮುಡಾ ಪ್ರಕರಣದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ಶೋಕಸ್​ ನೋಟಿಸ್​ ಜಾರಿ ಮಾಡಿದ್ದಾರೆ. ಶೋಕಸ್​ ನೋಟಿಸ್​ ಗೆ ವಿರೋಧ ವ್ಯಕ್ತಪಡಿಸಿ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ರ್ನಿಣಯದ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ನಾವು ಯಾವುದೇ ಪಿತೂರಿಗೆ ಬಗ್ಗಲ್ಲ ಎಂದು ಹೇಳಿದರು. ಕ್ರಿಮಿನಲ್​ ಪ್ರಕರಣ ದಾಖಲಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿರುವ ವ್ಯಕ್ತಿಯ ಹಿನ್ನೆಲೆಯ ಬಗ್ಗೆ ತಿಳಿಯಬೇಕು. ಈ ಹಿಂದೆ ಈ ವ್ಯಕ್ತಿಗೆ ಸುಪ್ರೀಂ ಕೋರ್ಟ್​ ದಂಡ ಹಾಕಿದೆ.

ಬಿಜೆಪಿಯವರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಶುದ್ಧ ಹಸ್ತದ ಮುಖ್ಯಮಂತ್ರಿ ಅವರಿಗೆ ತೊಂದರೆ ನೀಡುವ ಕೆಲಸ ಆಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಸ್ವಾಲಿನ್​ ಹಾಗೂ ಕರ್ನಾಟಕದಲ್ಲಿ ನಮ್ಮ ಮುಖ್ಯಮಂತ್ರಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು. ಇನ್ನು ಬಿಜೆಪಿಯವರು ಮೈಸೂರಿಗೆ ಕೈಗೊಂಡಿರುವ ಪಾದಯಾತ್ರೆಗೆ, ಬಿಜೆಪಿಯವರು ಪಾದಯಾತ್ರೆ ನಡೆಸಲಿರುವುದರಿಂದ ಆ ಪಕ್ಷದ ಮುಖಂಡರ ಆರೋಗ್ಯ ಸುಧಾರಿಸಲಿದೆ ಎಂದು ಲೇವಡಿ ಮಾಡಿದರು. ಈ ಹಿಂದೆ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ರಾಜ್ಯವನ್ನು ಲೂಟಿ ಮಾಡಿದ್ದಾರೆ. ಅವರ ಕಾಲದ ಹಗರಣವನ್ನು ಒಂದೊಂದಾಗಿ ಹೊರ ತೆಗೆದು ರಾಜ್ಯದ ಜನತೆ ಮುಂದಿಡುತ್ತೇವೆ ಎಂದರು.