ಬಸವನಬಾಗೇವಾಡಿ: ವೀರಶೈವ ಲಿಂಗಾಯತ ಮಠಮಾನ್ಯಗಳು ರಾಜ್ಯ ಮತ್ತು ದೇಶದ ವಿವಿಧೆಡೆ ಅಕ್ಷರ ಮತ್ತು ಅನ್ನ ದಾಸೋಹ ಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮಸಬಿನಾಳದ ವಿರಕ್ತಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಪುರಾಣ ಪ್ರವಚನ ಮಹಾಮಂಗಲ ಹಾಗೂ ಮಹಾದಾಸೋಹಿ ಲಿಂ.ಶಿವಾನಂದ ಶಿವಯೋಗಿಗಳ 44ನೇ ಪುಣ್ಯ ಸ್ಮರಣೋತ್ಸವ ಮತ್ತು ಧರ್ಮಸಭೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದವರು.
ಇಂದಿನ ಆಧುನಿಕ ಯುಗದಲ್ಲಿ ಧರ್ಮ ಮತ್ತು ಸಂಸ್ಕೃತಿ, ಸಂಸ್ಕಾರ ಉಳಿಯಬೇಕಾದರೆ ಮಠ ಮಾನ್ಯಗಳ ಪಾತ್ರ ದೊಡ್ಡದು. ಅದರಲ್ಲಿಯೂ ದಾಸೋಹ, ಅಕ್ಷರ ಪರಂಪರೆಯನ್ನು ನಾಡಿನ ಹಲವು ಮಠಗಳು ಹೊಂದಿವೆ. ಅದರಲ್ಲಿ ವಿಶೇಷ ಸ್ಥಾನ ತಾಲೂಕಿನ ಮಸಬಿನಾಳ ಶ್ರೀಮಠಕ್ಕೆ ಸಲ್ಲುತ್ತದೆ. ಈ ಮಠವು ಆದಿ ಅನಾದಿ ಕಾಲದಿಂದಲೂ ದಾಸೋಹ ಮಠವಾಗಿ ಅನೇಕ ಜನರ ಹಸಿವನ್ನು ನೀಗಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿದೆ ಎಂದು ಹೇಳಿದರು.
ಶ್ರೀಮಠದ ಪೀಠಾಧಿಪತಿ ಸಿದ್ದರಾಮ ಶ್ರೀಗಳು ಮಾತನಾಡಿ, ಗ್ರಾಮದ ಸಮಸ್ತ ಭಕ್ತರ ಸಹಾಯ ಸಹಕಾರದಿಂದ ಶ್ರೀಮಠದಲ್ಲಿ ಅನೇಕ ದಶಕಗಳಿಂದ ನೂರಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಸಹಕಾರವಾಗಿದೆ ಎಂದರು.
ಇಂಗಳೇಶ್ವರ ವಿರಕ್ತಮಠದ ವಚನ ಶಿಲಾಮಂಟಪದ ಹಿರಿಯ ಚನ್ನಬಸವ ಶ್ರೀಗಳು, ದೇವರಹಿಪ್ಪರಗಿಯ ಮಡಿವಾಳೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸೊನ್ನ ವಿರಕ್ತಮಠದ ಡಾ.ಶಿವಾನಂದ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ನೆಲೊಗಿ ಸಿದ್ದಲಿಂಗ ಶ್ರೀಗಳು ನೇತೃತ್ವ ವಹಿಸಿದ್ದರು. ಪಡೆಕನೂರ ಮಲ್ಲಿಕಾರ್ಜುನ ಶ್ರೀಗಳು, ಬಸವನಬಾಗೇವಾಡಿ ಸಿದ್ದಲಿಂಗ ಶ್ರೀಗಳು, ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಬೇಲೂರು ಡಾ.ಮಹಾಂತ ಬಸವಲಿಂಗ ಶ್ರೀಗಳು ಸಮ್ಮುಖ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಎಪಿಎಂಸಿ ಮಾಜಿ ಸದಸ್ಯ ಬಸವರಾಜ ಸೊಪುರ ಇತರರಿದ್ದರು. ಬಾಬುಗೌಡ ಪಾಟೀಲ ಸ್ವಾಗತಿಸಿದರು. ಡಿ.ಎಸ್.ಅಗಸಬಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.